ಭಾರತೀಯ ಇತಿಹಾಸದ ಆಧಾರಗಳು ( ಭಾಗ -1) , Sources of Indian History

ಭಾರತೀಯ ಇತಿಹಾಸದ ಆಧಾರಗಳು ( ಭಾಗ -1) , Sources of Indian History




ಭಾರತಿಯ ಇತಿಹಾಸದ ಆಧಾರಗಳು

 








ಭಾರತಿಯ ಇತಿಹಾಸದ ಆಧಾರಗಳು

 

 

ಯಾವುದೇ ಒಂದು ದೇಶದ ಇತಿಹಾಸ ರಚನೆಗೆ ಆಧಾರಗಳು ಬಹುಮುಖ್ಯ. ಆದ್ದರಿಂದಲೇ ಅಧಾರಗಳಿಲ್ಲದೆ ಇತಿಹಾಸವಿಲ್ಲ. ಇತಿಹಾಸವು ಮಾನವನ ಗತಕಾಲದ ಜೀವನದ ಸತ್ಯಸಂಗತಿಯ ನಿರೂಪಣೆಯಾಗಬೇಕಾದರೆ ಆಧಾರಗಳ ಗುರುತುಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ಇತಿಹಾಸದಲ್ಲಿ ವಿವರಿಸಿರುವ ಘಟನೆಗಳು, ವ್ಯಕ್ತಿಗಳು ಕಟ್ಟುಕತೆಯ ಅಂಶಗಳಾಗಿರುತ್ತವೆ. ಪ್ರಾಚೀನ ಭಾರತದ ಇತಿಹಾಸ ಭವ್ಯವಾದುದು ಹಾಗೂ ಬಹುಮುಖವಾದುದು. ಪ್ರಾಚೀನ ಭಾರತೀಯರು ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ವೈಜ್ಞಾನಿಕ, ಸಾಹಿತ್ಯ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಪ್ರಪಂಚದಲ್ಲೇ ಅದ್ಭುತವಾದ ಪ್ರಗತಿಯನ್ನು ಸಾಧಿಸಿದ್ದರು. ಆದಿ ಕಾಲದಿಂದ ವೈವಿಧ್ಯಮಯವಾದ ನಾಗರಿಕತೆಗಳು, ಧರ್ಮಗಳು, ನವೀನ ಚಿಂತನೆಗಳನ್ನು ಬೆಳೆಸಿಕೊಂಡು ಬಂದ ಭಾರತದ ಇತಿಹಾಸವನ್ನು ಅರಿಯಲು ವಿವಿಧ ಕ್ಷೇತ್ರಗಳಲ್ಲಿ ಆಧಾರಗಳು ಯಥೇಚ್ಛವಾಗಿ ದೊರೆಯುತ್ತವೆ. ಆದರೆ ವೈಜ್ಞಾನಿಕ ಕ್ರಮಬದ್ಧ ಇತಿಹಾಸ ರಚನೆಗೆ ಐತಿಹಾಸಿಕ ಆಧಾರಗಳ ಕೊರತೆಯಿದೆ.

 

ಪ್ರಾಚೀನ ಭಾರತದ ಇತಿಹಾಸ ರಚನೆಗೆ ಎದುರಾಗುವ ತೊಡಕುಗಳು

 

ಪ್ರಾಚೀನ ಭಾರತದ ಇತಿಹಾಸ ರಚನೆಗೆ ಹೆಚ್ಚಿನ ಪ್ರಯತ್ನ ಅತಿಅವಶ್ಯಕ. ಏಕೆಂದರೆ ಈಗಿನ ಕಾಲದಲ್ಲಿದ್ದಂತಹ ಮುದ್ರಣಕಲೆಯಾಗಲಿ ಅಥವಾ ಬರವಣಿಗೆಯ ಅಂಶಗಳನ್ನು ಸಂಗ್ರಹಿಸುವ ಕಲೆಯಾಗಲಿ ಅಂದಿನ ಜನರಿಗೆ ತಿಳಿದಿರಲಿಲ್ಲ. ಅಂದಿನ ಕಾಲದ ಬರವಣಿಗೆಗಳು ತಾಳೆಗರಿ ಹಾಗೂ ತಾಮ್ರಪತ್ರಗಳಲ್ಲಿ ಹೆಚ್ಚಾಗಿ ಅಡಕವಾಗಿಡ್ಡವು. ಅವುಗಳನ್ನು ಸುರಕ್ಷಿತ ಕ್ರಮದಲ್ಲಿ ಇಡದಿದ್ದರಿಂದ ಮಳೆ ಗಾಳಿ, ಮಣ್ಣಿನಲ್ಲಿ ಹೂತು ನಾಶವಾಗಿ ಅವುಗಳಲ್ಲಿನ ಬರವಣಿಗೆಗಳನ್ನು ಓದಲಾಗುತ್ತಿಲ್ಲ. ಇನ್ನೂ ಕೆಲವು ವೇಳೆ ಧಾಳಿಕಾರರ ಆಕ್ರೋಶಕ್ಕೆ ಸಿಲುಕಿ ಅನೇಕ ಆಧಾರಗಳು ನಾಶವಾಗಿವೆ. ಅಂತಹ ವೇಳೆಯಲ್ಲಿ ಭಾರತದ ಇತಿಹಾಸವನ್ನು ವ್ಯವಸ್ಥಿತವಾಗಿ ರಚಿಸಲು ನಾಣ್ಯಗಳು, ಮಡಕೆ ಕುಡಿಕೆಗಳು, ಗುಹೆಗಳು ಮತ್ತು ದೇವಾಲಯಗಳಲ್ಲಿನ ಕಲಾತ್ಮಕ ಚಿತ್ರಗಳು, ಪ್ರಾಚೀನ ಅವಶೇಷಗಳು ಹಾಗೂ ಭಾರತವನ್ನು ಸಂದರ್ಶಿಸಿದ ವಿದೇಶಿ ಪ್ರವಾಸಿಗರ ಬರವಣಿಗೆಗಳು ಸಹಾಯಕವಾಗುತ್ತವೆ. ಆದರೆ ಇವುಗಳನ್ನು ವ್ಯವಸ್ಥಿತವಾಗಿ, ಕೂಲಂಕುಶವಾಗಿ, ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿದಲ್ಲಿ ಮಾತ್ರ ಸತ್ಯ ಸಂಗತಿಗಳು ದೊರೆಯುತ್ತವೆ. ಈ ಆಧಾರಗಳಲ್ಲಿನ ಬರವಣಿಗೆಯ ಭಾಷೆಗಳು, ಲಿಪಿಗಳು ವಿಭಿನ್ನವಾಗಿವೆ. ಹಾಗಾಗಿ ಇತಿಹಾಸಕಾರನು ಭಾರತೀಯ ಹಾಗೂ ಭಾರತೇತರ ಭಾಷೆಗಳನ್ನರಿತ ಬಹುಭಾಷಾಭಿಜ್ಞನಾಗಿರಬೇಕು. ಮೂಲಪಾಠ ವಿಮರ್ಶೆಯಲ್ಲಿ ಪಳಗಿದವನಾಗಿರಬೇಕು. ಶಿಲಾಶಾಸನ ಶಾಸ್ತ್ರ, ನಾಣ್ಯ ಶಾಸ್ತ್ರ, ಮತ್ತಿತರ ಸಹ ವಿಜ್ಞಾನಗಳಲ್ಲಿಯೂ ತಜ್ಞನಾಗಿರಬೇಕು. ಆಧಾರಗಳ ಭಾಷಾ ಬೆಳವಣಿಗೆ ಎಷ್ಟಿರುತ್ತದೆಂದರೆ ವೇದದ ಸಂಸ್ಕೃತಕ್ಕೂ ನಂತರದ ವಿದ್ವಾಂಸರ ಸಂಸ್ಕೃತಕ್ಕೂ ಬಹಳ ಅಂತರವಿರುತ್ತದೆ. ಪ್ರಾಕೃತ, ಪಾಳಿ, ಬ್ರಾಡ್ಮಿ ಲಿಪಿ ಮತ್ತು ಭಾಷೆಗಳಲ್ಲಿ ಅಸಂಖ್ಯಾತ ಬದಲಾವಣೆಗಳು ಸ್ಥಳದಿಂದ ಸ್ಥಳಕ್ಕೆ ಕಂಡುಬರುತ್ತವೆ. ದೇಶೀಯ ಭಾಷೆಗಳಾದ ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಗಳು ವಿಕಾಸ ಹೊಂದಿದ ಹಾಗೆ ಆಧಾರಗಳು ರಚಿತವಾಗಿವೆ. ವಿದೇಶಿ ಸಾಹಿತ್ಯವು ಹೆಚ್ಚಾಗಿ ಗ್ರೀಕ್, ಲ್ಯಾಟಿನ್, ಟಿಬೇಟಿಯನ್, ಚೀನಿ, ಆರೇಬಿಕ್ ಹಾಗೂ ಪರ್ಷಿಯನ್ ಭಾಷೆಗಳಲ್ಲಿವೆ. ಹೀಗೆ ಅನೇಕ ತೊಡಕುಗಳ ನಡುವೆಯೂ ಇತಿಹಾಸಕಾರನು ವೈಜ್ಞಾನಿಕ ಕ್ರಮದಲ್ಲಿ ಇತಿಹಾಸ ರಚನೆಗೆ ಮುಂದಾದರೂ ದಾಖಲೆಯನ್ನು ಓದುವಲ್ಲಿ ಮಾಡಿದ ಒಂದು ತಪ್ಪು ಹೇಗೆ ಪೂರ್ಣ ಇತಿಹಾಸದ ಪಾಠವನ್ನು ತಿರುಚುತ್ತದೆ ಎಂಬುದನ್ನು ಡಿ.ಡಿ. ಕೊಸಾಂಬಿಯವರ ಕೃತಿಯ ಉದಾಹರಣೆಯಿಂದ ತಿಳಿದುಕೊಳ್ಳಬಹುದು. "1903ರಲ್ಲಿ ಸೆಸಿಲ್ ಬೆಂಡಾಲ್ ಎಂಬ ವಿದ್ವಾಂಸರು ನೇಪಾಳದಲ್ಲಿ ದೊರಕಿದ ಪ್ರಾಚೀನ ಸಂಸ್ಕೃತ ರಾಮಾಯಣದ ಒಂದು ಭಾಗವು ಗಂಗೇಯ ದೇವನ ಆಳ್ವಿಕೆಯ ಕಾಲವಾದ ಕ್ರಿ.ಶ. 1076 ರಲ್ಲಿ ಬಿಹಾರದಲ್ಲಿ ಬರೆಯಲ್ಪಟ್ಟಿತೆಂದು ವ್ಯಾಖ್ಯಾನಿಸಿದರು. ಈ ಕೃತಿಯ ರಾಜನನ್ನು ಗೌಡ ಧ್ವಜ ಅಂದರೆ"ಬಂಗಾಳದ ಬಾವುಟ"ವೆಂದು ಈ ಕೃತಿಯಲ್ಲಿ ಕರೆಯಲಾಗಿತ್ತು. ಬೆಂಡಾಲ್ ಮತ್ತಿತರು ಈ ವ್ಯಕ್ತಿಯನ್ನು ಆಲ್ಲೆರೂನಿಯ

"ಕಿತಾಬ್-ಉಲ್ ಹಿಂದ್" ಎಂಬ ಕ್ರಿ. ಶ. 1030ರ ಸುಮಾರಿನಲ್ಲಿ ರಚಿತವಾದ ಕೃತಿಯಲ್ಲಿನ ದಕ್ಷಿಣದ ಕಳಚೂರಿ ದೊರೆ ಗಂಗೇಯದೇವನೆಂಬುದಾಗಿ ಗುರುತಿಸಿದರು. ಈ ಕೃತಿಯ ಅರ್ಥದಲ್ಲಿ ಗಂಗೇಯದೇವನು ಬಂಗಾಳವನ್ನು ಜಯಿಸಿದ್ದನೆಂಬುದಾಗಿತ್ತು. ಕೆಲವು ವಿದ್ವಾಂಸರು ವ್ಯಕ್ತಿಯ ಗುರುತಿಸುವಿಕೆಯ ಬಗ್ಗೆ ಅನುಮಾನಪಟ್ಟು ಕಳಚೂರಿ ಮನೆತನದ ಸಂಸ್ಕೃತ ಶಾಸನಗಳನ್ನು ಅಧ್ಯಯನ ಮಾಡಿದಾಗ ಬಂಗಾಳವನ್ನು ಜಯಿಸಿದ ಅಂಶವನ್ನು ಬೆಂಬಲಿಸುವ ಸಂಗತಿಗಳು ದೊರೆಯಲ್ಲಿಲ್ಲ. 1940ರಲ್ಲಿ ಲಾಹೋರ್‌ನಲ್ಲಿ ಅದೇ ಕೃತಿಯ ಉತ್ತಮ ಫೋಟೋಸ್ಪಾಟನ್ನು ವಿದ್ವಾಂಸರ ಮುಂದೆ ಪ್ರದರ್ಶಿಸಿದಾಗ ಅಲ್ಲಿದ್ದ ಒಬ್ಬ ವಿದ್ವಾಂಸರು ಕೃತಿಯ ಬರವಣಿಗೆಯನ್ನು ತಪ್ಪಾಗಿ ಓದಲಾಗಿದೆ ಎಂದು ಗುರುತಿಸಿದರು. ಗರುಡ ಧ್ವಜ ಎಂಬ ಬಿರುದನ್ನು ಗೌಡ ಧ್ವಜ ಎಂದು ಹಿಂದೆ ಓದಲಾಗಿತ್ತು. ಸರಿಪಡಿಸಿಕೊಂಡ ಬಿರುದಾದ ಗರುಡ ಧ್ವಜದ ಅರ್ಥ ಗಂಗೇಯ ದೇವನು ವಿಷ್ಣುವಿನ ಅನುಯಾಯಿಯಾಗಿದ್ದು ವಿಷ್ಣುವಿನ ಕಾಲ್ಪನಿಕ ವಾಹನವಾದ ಗರುಡವನ್ನು ತನ್ನ ರಾಜ್ಯಧ್ವಜದಲ್ಲಿ ಸೇರಿಸಿಕೊಂಡಿದ್ದನು ಎಂಬುದಾಗಿ. ಹೀಗೆ ಕ್ರಿ. ಶ. 1019-20ರ ಅವಧಿಯಲ್ಲಿ ರಾಷ್ಟ್ರಕೂಟರ ಸಾಮಂತನಾಗಿ ಬಿಹಾರದ ಚಿಕ್ಕ ಭಾಗವನ್ನಾಳುತ್ತಿದ್ದ ರಾಜನನ್ನು ಬಂಗಾಳವನ್ನು ಜಯಿಸಿದ ವಿಜಗೀಶು ಎಂದು ಚಿತ್ರಿತವಾಗುವುದನ್ನು ಸಂಶೋಧನೆಯ ಮೂಲಕ ಕಂಡುಹಿಡಿದು ತಪ್ಪಿಸಲಾಯಿತು." ಹೀಗೆ ಪ್ರಾಚೀನ ಬರವಣಿಗೆಯನ್ನು ಓದುವಾಗ ಒಂದು ಅಕ್ಷರದಲ್ಲಿ ಮಾಡಿಕೊಂಡ ಮಾರ್ಪಾಡು ಪೂರ್ಣ ಅರ್ಥವನ್ನೇ ಬದಲಾಯಿಸುತ್ತದೆ. ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಭಾರತದ ಇತಿಹಾಸದ ಕಾಲಾನುಕ್ರಮಣಿಕೆಯಲ್ಲಿ ಅನೇಕ ಬಿರುಕುಗಳು ಅನುಮಾನಗಳು ಉಳಿದಿವೆ. ಆ ಬಿರುಕುಗಳನ್ನು, ಅನುಮಾನಗಳನ್ನು ತುಂಬಲು ದಿನದಿನವೂ ಸಂಶೋಧನೆಗಳು ನಡೆಯುತ್ತಿವೆ, ಹೀಗೆ ಭಾರತದ ಇತಿಹಾಸವನ್ನು ರಚಿಸುವ ಇತಿಹಾಸಕಾರನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಪ್ರಾಚೀನ ಭಾರತೀಯರಲ್ಲಿ ಐತಿಹಾಸಿಕ ಪ್ರಜ್ಞೆ

 

ಭಾರತದ ಇತಿಹಾಸದ ಮೂರು ಕಾಲಗಳ ಮೂಲಭೂತ ಆಧಾರಗಳ ಲಕ್ಷಣ ಹಾಗೂ ಪರಿಮಿತಿ ವಿಭಿನ್ನವಾಗಿದೆ. ಪ್ರಾಚೀನ ಭಾರತದ ಇತಿಹಾಸ ರಚನೆಗೆ ಪ್ರಮುಖ ಆಧಾರಗಳೆಂದರೆ ವೇದಗಳು, ಬ್ರಾಹ್ಮಣಕಗಳು, ಉಪನಿಷತ್ತು, ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ, ಪುರಾಣ, ಬೌದ್ಧ ಸಾಹಿತ್ಯ ಮುಂತಾದವುಗಳು. ಆದರೆ ಇವುಗಳಲ್ಲಿ ಹೆಚ್ಚಿನವು ದೇವರು, ಧರ್ಮ, ಮತ, ನೀತಿ, ತತ್ವಜ್ಞಾನ, ಆತ್ಮ, ಪರಮಾತ್ಮ, ಸ್ವರ್ಗ, ನರಕ ಮುಂತಾದ ಅಂಶಗಳನ್ನು ಸಾಹಿತ್ಯ ಶೈಲಿಯಲ್ಲಿ ವರ್ಣಿಸುವ, ಬೋಧಿಸುವ ವಾಹ್ಮಯ ಕೃತಿಗಳಾಗಿವೆ. ಆದರೆ ವೈಜ್ಞಾನಿಕವಾದ, ಯಥಾರ್ಥವಾಗಿ ಘಟನೆಗಳನ್ನು ವಿವರಿಸುವ, ಶಾಸ್ತ್ರೀಯ ಪದ್ಧತಿಯ ಕಾಲಕ್ರಮವನ್ನು ಅನುಸರಿಸುತ್ತಾ ಇತಿಹಾಸವನ್ನು ನಿರೂಪಿಸುವ ವಸ್ತುನಿಷ್ಠ ಚಾರಿತ್ರಿಕ ಕೃತಿಗಳು ಇವಲ್ಲ. ಹೀಗೆ ಪ್ರಾಚೀನ ಭಾರತದ ಇತಿಹಾಸ ರಚನೆಗೆ ಆಧಾರಗಳ ಕೊರತೆ ಎದ್ದು ಕಾಣುವುದರಿಂದ ಭಾರತೀಯರಲ್ಲಿ ಐತಿಹಾಸಿಕ ಪ್ರಜ್ಞೆ ಅಷ್ಟಾಗಿ ಬೆಳೆದಿರಲಿಲ್ಲವೆಂದು ಹಲವು ಚರಿತ್ರಕಾರರು ಅಭಿಪ್ರಾಯಪಟ್ಟಿರುತ್ತಾರೆ. ಅದರಲ್ಲಿ ಪ್ರಮುಖನಾದವನು ಅರಬ್ ಇತಿಹಾಸಕಾರನಾದ ಆಲ್ಲೆರುನಿ. ಇವನು ಭಾರತೀಯರಲ್ಲಿ ಕಂಡ ಐತಿಹಾಸಿಕ ದೃಷ್ಟಿಯ ಅಭಾವವನ್ನು ಸೂಚಿಸುತ್ತಾ "ಹಿಂದೂಗಳು ಐತಿಹಾಸಿಕ ಘಟನೆಗಳ ನಿರೂಪಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ. ಅವರು ಕಾಲಗಣನೆಗೆ ಅನುಗುಣವಾಗಿ ವಿಷಯಗಳನ್ನು ನಿರೂಪಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಹಾಗೂ ಅವರನ್ನು ಆ ವಿಷಯಕ್ಕಾಗಿ ಒತ್ತಾಯಿಸಿದಲ್ಲಿ ಏನು ಹೇಳಬೇಕೆಂಬುದು ತೋಚದೆ ಕತೆ ಹೇಳಲು ಪ್ರಾರಂಭಿಸುತ್ತಾರೆ" ಎಂದಿದ್ದಾನೆ.

 

19ನೇ ಶತಮಾನದಲ್ಲಿ ಭಾರತದ ಗತಕಾಲದ ಶೋಧನೆ ಮತ್ತು ಬರವಣಿಗೆಯಲ್ಲಿ ತೊಡಗಿದ ಪಾಶ್ಚಿಮಾತ್ಯ ವಿದ್ವಾಂಸರು ಹಾಗೂ ಬ್ರಿಟಿಷ್ ಆಡಳಿತಗಾರ ಇತಿಹಾಸಕಾರರು ಭಾರತದ ಇತಿಹಾಸ ರಚನೆಯಲ್ಲಿ ತೊಡಗಿದರು. ಇವರು ಭಾರತದ ಪ್ರಾರಂಭದ ಇತಿಹಾಸವನ್ನು ರಾಜವಂಶಗಳ ಹಾಗೂ ಸಾಮ್ರಾಜ್ಯಗಳ ಏಳುಬೀಳುಗಳಿಗೆ ಸಂಬಂಧಿಸಿದಂತೆ ಬರೆದರು. ಭಾರತದ ಇತಿಹಾಸದಲ್ಲಿ ನಡೆದ ಘಟನೆಗಳನ್ನು ರಾಜರ ಸುತ್ತ ಹೆಣೆಯಲಾರಂಭಿಸಿ ಭಾರತೀಯ ರಾಜನು ನಿರಂಕುಶನು, ಪ್ರಜಾಹಿತವನ್ನು ನಿರ್ಲಕ್ಷಿ್ರಸುವವನನ್ನಾಗಿ ಚಿತ್ರಿಸಲಾರಂಭಿಸಿ ಭಾರತದ ಇತಿಹಾಸದಲ್ಲಿ ಬ್ರಿಟಿಷ್ ಆಡಳಿತ ಪದ್ಧತಿಯೇ ಅತಿ ಶ್ರೇಷ್ಠ ರಾಜಕೀಯ ವ್ಯವಸ್ಥೆಯೆಂದು ಬಿಂಬಿಸುವ ಇತಿಹಾಸವನ್ನು ಬರೆಯುತ್ತಾ ಭಾರತೀಯರ ಐತಿಹಾಸಿಕ ಪ್ರಜ್ಞೆಯನ್ನು ಟೀಕಿಸಲಾರಂಭಿಸಿದರು. ಡಾ| ಸ್ವೀಟರು ಇದೇ ಧಾಟಿಯಲ್ಲಿ ಬರೆಯುತ್ತಾ "ಭಾರತೀಯರು ಐತಿಹಾಸಿಕ ಸಂಗತಿಗಳನ್ನು ಒಂದು ನಿರ್ದಿಷ್ಟವಾದ ಮಿತಿಯಲ್ಲಿ ಬರೆಯಬಲ್ಲವರಾಗಿದ್ದರು. ಇತಿಹಾಸವೆಂದೇ ರಚಿತವಾದ. ನಿರ್ದಿಷ್ಟವಾಗಿ ನಂಬುವಂತಹ ಐತಿಹಾಸಿಕ ಕೃತಿಯನ್ನು ಅವರು ಬಿಟ್ಟು ಹೋಗಿರುವುದಕ್ಕೆ ಯಾವ ಪುರಾವೆಗಳೂ ಇಲ್ಲ" ಎಂದಿದ್ದಾರೆ. ಹೀಗೆ ಮಧ್ಯಯುಗೀನ ಮತ್ತು ಪಾಶ್ಚಿಮಾತ್ಯ ಲೇಖಕರ ಬರವಣಿಗೆಗಳಿಂದಾಗಿ "ವಿಶ್ವದ ದೃಷ್ಟಿಯಲ್ಲಿ ಭಾರತವೆಂದರೆ ಮಹಾರಾಜರ, ಹಾವಾಡಿಗರ ಮತ್ತು ಹಗ್ಗದ ಕಣ್ಣಟ್ಟು ಮಾಡುವ ಜಾದೂಗಾರರ ದೇಶ, ಭಾರತವೆಂದರೆ ಆಗಣಿತ ಸಂಪತ್ತನ್ನು, ಆಧ್ಯಾತ್ಮಿಕ ಘಟನೆಗಳನ್ನು ಮತ್ತು ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಂಡಿತರನ್ನು ಹೊಂದಿದ ದೇಶ, ಬಂಗಾರವನ್ನು ಅಗೆಯುವ ಇರುವೆಗಳಿಂದ ಹಿಡಿದು ಅರಣ್ಯಗಳಲ್ಲಿ ನಗ್ನವಾಗಿ ತಿರುಗುವ ವೇದಾಂತಿಗಳ ದೇಶವೆಂದೇ ಚಿತ್ರಿತವಾಗಿ ಪ್ರಚಲಿತವಾದವು. ಹಾಗೆಯೇ ಪ್ರಾಚೀನ ಭಾರತದ ವೇದಾಂತ ಮತ್ತು ಸಾಹಿತ್ಯಗಳನ್ನು ಅಭ್ಯಸಿಸಿದ ಇತಿಹಾಸಕಾರರು ಭಾರತೀಯ ಜೀವನ ಕ್ರಮವು ಆಧ್ಯಾತ್ಮ ಮತ್ತು ಧಾರ್ಮಿಕ ನಂಬುಗೆಯ ಸೂಕ್ಷತೆಗಳಲ್ಲಿ ಸಂಪೂರ್ಣವಾಗಿ ಲೀನವಾಗಿ ಹೋದುದರಿಂದ ಜೀವನದ ಐಹಿಕ ವಿಷಯಗಳನ್ನು ಅಲಕ್ಷಿಸಲಾಗಿತ್ತೆಂಬ ಟೀಕೆಯನ್ನು ಮಾಡಲಾರಂಭಿಸಿದರು..

 

ವಿದೇಶಿ ಇತಿಹಾಸಕಾರರ ಟೀಕೆಯ ಜೊತೆಗೆ ಆರ್.ಸಿ. ಮಜುಂದಾರ್‌ರವರು ಸಹ "ಪ್ರಾಚೀನ ಭಾರತೀಯರು ಬೇರೆ ಕ್ಷೇತ್ರಗಳಲ್ಲಿ ಉನ್ನತವಾದ ವಿಫುಲ ಸಾಹಿತ್ಯವನ್ನು ರಚಿಸಿದ್ದರೂ ರಾಜರ, ಸಾಮ್ರಾಜ್ಯಗಳ ಉಗಮ ಮತ್ತು ಅವನತಿಯ ಕಾಲಾನುಕ್ರಮಣಿಕೆಯ ಲಿಖಿತ ದಾಖಲೆಗಳನ್ನು ಇಡುವಲ್ಲಿ ಗಮನ ಹರಿಸಿಲ್ಲ" ಎಂದಿದ್ದಾರೆ.

 

ಮೇಲಿನ ವ್ಯಾಖ್ಯಾನಗಳನ್ನು ಗಮನಿಸಿದಾಗ ಭಾರತೀಯರಲ್ಲಿ ಇತಿಹಾಸದ ದೃಷ್ಟಿ, ಇತಿಹಾಸ ಪ್ರಜ್ಞೆ ಎಂದಿಗೂ ಇರಲಿಲ್ಲವೆಂಬ ಭಾವನೆ ಮೂಡುತ್ತದೆ. ಪ್ರಾಚೀನ ಭಾರತದಲ್ಲಿ ಧೂಸಿಡೈಡಸ್ ಅಥವಾ ಹೆರೋಡೊಟಸ್‌ರಂತಹವರಿಂದ ರಚಿತವಾದ ಪ್ರತಿಷ್ಠಿತ ವೈಜ್ಞಾನಿಕ ಐತಿಹಾಸಿಕ ಗ್ರಂಥಗಳಂತಹ ಕೃತಿಗಳ ಅಭಾವಿದ್ದರೂ ಐತಿಹಾಸಿಕ ಪ್ರಜ್ಞೆಯೇ ಇರಲಿಲ್ಲವೆಂಬ ವಾದದಲ್ಲಿ ಹುರುಳಿಲ್ಲ. ಡಾ| ಕೀಥ್‌ರವರು "ಭಾರತೀಯರ ರಾಶಿ ರಾಶಿ ಸಾಹಿತ್ಯದಲ್ಲಿ ಇತಿಹಾಸವನ್ನೇ ಪ್ರತಿನಿಧಿಸುವ ಅಂಶ ವಿರಳ. ಭಾರತದಲ್ಲಿ ಐತಿಹಾಸಿಕ ಕೃತಿ ಅಥವಾ ಇತಿಹಾಸಕಾರರು ಜನಿಸದಿರಲು ಕಾರಣ ಭಾರತದಲ್ಲಿ ಗಮನಾರ್ಹ ರಾಜಕೀಯ ಘಟನೆ ಸಂಭವಿಸದೆ ಇದ್ದುದು. ಗ್ರೀಕ್ ಮೇಲೆ ನಡೆದ ಪರ್ಷಿಯನ್ನರ ಪ್ರಬಲ ಧಾಳಿಯು ಗ್ರೀಕ್‌ನಲ್ಲಿ ಹೆರೋಡೊಟಸ್‌ನಂತಹ ಇತಿಹಾಸಕಾರರು ಜನಿಸಲು ಕಾರಣವಾಯಿತು." ಎಂದು ಐತಿಹಾಸಿಕ ಪ್ರಜ್ಞೆಯ ಅಭಾವಕ್ಕೆ ಕಾರಣವನ್ನು ನೀಡುತ್ತಾರೆ.

 

ವಿಶ್ವದ ಸಾಹಿತ್ಯ ಕ್ಷೇತ್ರದ ಅತಿ ಪ್ರಾಚೀನ ಕೃತಿಯಾದ ಋಗೈದದ ಮೂರು ಸ್ತೋತ್ರಗಳಲ್ಲಿ ಇತಿಹಾಸವನ್ನು ಪೂರ್ವ ವೃತ್ತಾಂತವೆಂಬ ವ್ಯಾಖ್ಯಾನದಲ್ಲಿ ಅರ್ಥೈಸಲಾಗಿದೆ. ಆದ್ದರಿಂದ ಋಗ್ವದದ ಮೂರು ಸ್ತೋತ್ರಗಳನ್ನು ಇತಿಹಾಸ ಸೂಕ್ತಗಳೆಂದು ಕರೆಯುತ್ತಾರೆ. ಋಗ್ರೇದದಲ್ಲಿ ಈ ಶಬ್ದದ ನಿಖರ ಅರ್ಥವನ್ನು ವ್ಯಾಖ್ಯಾನಿಸದಿದ್ದರೂ ಬ್ರಾಹ್ಮಣಗಳು ಮತ್ತು ಉಪನಿಷತ್ತುಗಳು ಇತಿಹಾಸವೆಂದರೆ ಗತಕಾಲದ ಘಟನೆಗಳನ್ನು ಉದ್ದೇಶಪೂರ್ವಕವಾಗಿ ನಿರೂಪಿಸುವುದು ಎಂದು ತಿಳಿಸುತ್ತವೆ. ಇತಿಹಾಸ ಎಂಬ ಪದದ ಅರ್ಥವು ವಿಶಾಲವಾದ ಹಾಗೂ ನಿಖರವಾದ ಅರ್ಥವ್ಯಾಪ್ತಿಯು ಮಹಾಕಾವ್ಯವಾದ ಮಹಾಭಾರತದಲ್ಲಿ ಕಂಡು ಬರುತ್ತದೆ. ಮಹಾಭಾರತದಲ್ಲಿಯೇ ಸೂಚಿತವಾಗಿರುವಂತೆ ಪಾಂಡವರ ವಿಜಯವನ್ನು ವರ್ಣಿಸುವ 'ಜಯ' ಎಂಬ ಮೂಲ ಇತಿಹಾಸ ಗ್ರಂಥವು ಮುಂದೆ ಬೆಳೆದು 'ಮಹಾಭಾರತ'ವೆಂಬ ಮಹಾಗ್ರಂಥವಾಯಿತು. ವೇದದಲ್ಲಿ ಹತ್ತು ರಾಜರ ಕಾಳಗದಂತಹ ಘಟನೆಗಳ ಸವಿಸ್ತಾರ ವರ್ಣನೆ ಕಂಡು ಬರುತ್ತದೆ. ಕೌಟಿಲ್ಯನು ತನ್ನ ಕೃತಿಯಾದ ಅರ್ಥಶಾಸ್ತ್ರದಲ್ಲಿ "ಸಾಮವೇದ, ಋಗ್ರೇದ, ಯಜುರ್ವೇದಗಳು ಹಾಗೂ ಅಥರ್ವಣವೇದ ಮತ್ತು ಇತಿಹಾಸ ವೇದಗಳು ಒಗ್ಗೂಡಿ ವೇದಗಳಾಗಿವೆ" ಎಂದು ಅಭಿಪ್ರಾಯಪಟ್ಟಿದ್ದಾನೆ. ಹಾಗೆಯೇ ಇತಿಹಾಸದ ವ್ಯಾಪ್ತಿಯಲ್ಲಿ ಪುರಾಣಗಳು, ಪುರಾತನ ವೃತ್ತಾಂತಗಳು, ಐತಿಹ್ಯಗಳು, ದೃಷ್ಟಾಂತ ಕಥೆಗಳು, ಧರ್ಮಶಾಸ್ತ್ರಗಳು ಮತ್ತು ಅರ್ಥಶಾಸ್ತ್ರಗಳು ಸೇರುತ್ತವೆ ಎಂದು ಕೌಟಿಲ್ಯನು ತಿಳಿಸುತ್ತಾನೆ. ನಂತರದ ಬೆಳವಣಿಗೆಯಲ್ಲಿ ಇತಿಹಾಸವು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಕಥೆಯ ರೂಪದಲ್ಲಿ ನಿರೂಪಿಸುವುದೇ ಇತಿಹಾಸ ಎಂಬ ಸಂಕ್ಷಿಪ್ತ ವ್ಯಾಖ್ಯಾನವು ಬಳಕೆಗೆ ಬಂದಿತು. 9ನೇ ಶತಮಾನದಲ್ಲಿ ಬಾಳಿದ್ದ ಜೈನ ಆದಿಪುರಾಣದ ಕರ್ತೃ ಜಿನಸೇನನು "ಇತಿಹಾಸವು ಬಹು ಆಸಕ್ತಿಯುತವಾದ ವಿಷಯ. ಪರಂಪರೆಯ ಪ್ರಕಾರ ಇದು ನೈಜವಾಗಿ ಏನು ಸಂಭವಿಸಿತು ಎಂಬುದನ್ನು ಕುರಿತುದಾಗಿದೆ" ಎಂದಿದ್ದಾನೆ.

 

ಹೀಗೆ ಇತಿಹಾಸವು ಪುರಾಣಕ್ಕಿಂತ ಭಿನ್ನವಾದ ಚಾರಿತ್ರಿಕ ರಚನೆ ಎಂಬ ವಿಷಯವನ್ನು ಭಾರತೀಯರು ಹಿಂದೆಯೇ ಅರಿತಿದ್ದರು. ವೇದ ಸಾಹಿತ್ಯದಲ್ಲಿ ರಾಜರ, ರಾಜವಂಶಗಳ ಪ್ರಶಸ್ತಿಗಳು ನಿರೂಪಿತವಾಗಿವೆ. ರಾಜರ ವಂಶಾವಳಿ, ಮುಖ್ಯ ಘಟನೆಗಳು, ಯುದ್ಧಗಳು ಮುಂತಾದುವುಗಳನ್ನು ಬರೆದಿಡುವ ಪದ್ಧತಿ ಅನೇಕ ಕಡೆ ರೂಢಿಯಲ್ಲಿದ್ದಿತು. ಮೌರ್ಯರ ಆಳ್ವಿಕೆಯಿಂದ ಆರಂಭವಾಗಿ, ಗುಪ್ತರ ನಂತರದ ಕಾಲದವರೆಗೆ ಸಾವಿರಾರು ಶಾಸನಗಳು ದೊರೆಯುತ್ತವೆ. ಅವುಗಳಲ್ಲಿ ಅನೇಕ ಮಹತ್ವದ ಘಟನೆಗಳು, ಕಾಲಾನುಕ್ರಮಣಿಕೆ ಉಕ್ತವಾಗಿವೆ. ಇತಿಹಾಸಕ್ಕೆ ಸಂಬಂಧಪಡದ ಕೃತಿಗಳಾದ ಪತಂಜಲಿಯ ಮಹಾಭಾಷ್ಯ ಮತ್ತು ಗಾರ್ಗಿಯ ಸಂಹಿತೆಗಳಲ್ಲಿ ಅಮೂಲ್ಯವಾದ ಐತಿಹಾಸಿಕ ಸಾಮಗ್ರಿಗಳು ದೊರಕುತ್ತವೆ. ಕಾಳಿದಾಸನ ರಘುವಂಶ, ದಂಡಿಯ ದಶಕುಮಾರ ಚರಿತ ಮತ್ತು ರಾಜಶೇಖರನ ಕಾವ್ಯಮೀಮಾಂಸಗಳಲ್ಲಿ ಭೂಗೋಳ ಸಂಬಂಧಿ ವಿಷಯಗಳು ಸಾಕಷ್ಟು ದೊರೆಯುತ್ತವೆ. ವಿಶಾಖದತ್ತನ ಮುದ್ರಾರಾಕ್ಷಸ, ಕಾಳಿದಾಸನ ಮಾಳವಿಕಾಗ್ನಿಮಿತ್ರ, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಕಲ್ದಣನ ರಾಜತರಂಗಿಣಿ ವಾಸ್ತವಿಕವಾಗಿ ಐತಿಹಾಸಿಕ ಕೃತಿಗಳಾಗಿವೆ. ಪ್ರಾಚೀನ ಇತಿಹಾಸಕಾರರಲ್ಲಿ ಕಲ್ಲಣನು ಆಗ್ರಗಣ್ಯನೆಂಬುದು ನಿರ್ವಿವಾದ. ಕಲ್ದಣನು ಪ್ರಾಚೀನ ಅವಶೇಷಗಳ ಅಭ್ಯಾಸದ ಬಗ್ಗೆ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದನು. ಅವುಗಳನ್ನು ಪರಿಶೋಧಿಸಿ ಕಾಳಜಿಪೂರ್ವಕವಾಗಿ ಅಭ್ಯಸಿಸಿದ್ದನು. ಕಾಶ್ಮೀರದಲ್ಲಿನ ಎಲ್ಲಾ ಶಿಲಾಶಾಸನಗಳನ್ನು, ನಾಣ್ಯಗಳನ್ನು ಗುರುತಿಸಿ ಓದಿ ತನ್ನ ಇತಿಹಾಸ ರಚನೆಗೆ ಬಳಸಿಕೊಂಡಿದ್ದನು. ಕಲ್ದಣನು ತನ್ನ ರಾಜತರಂಗಿಣಿಯಲ್ಲಿ "ರಾಗ, ದ್ವೇಷಗಳಿಂದ ಮುಕ್ತನಾದ ಗುಣವಂತ ಕವಿಯ ಹೊಗಳುವಿಕೆಯು ಮೌಲ್ಯವುಳ್ಳದ್ದು. ಅವನ ಭಾಷೆ ಸತ್ಯಸಂಗತಿಯನ್ನು ತೆರೆದಿಡಲು ಎಂದಿಗೂ ತಡೆತರದು" ಎಂದಿದ್ದಾನೆ. ಆದ್ದರಿಂದ "ಭಾರತದ ಥುಸಿಡೈಡಸ್"ನ ವಿಷಾದನೀಯ ಕೊರತೆಯು ಕಲ್ದಣನಿಂದ ತುಂಬಿ ಬಂದಿದೆಯೆಂದು ಹೇಳಬಹುದು.

 

 

 

 

ಪ್ರಾಚೀನ ಭಾರತೀಯ ಇತಿಹಾಸದ ಆಧಾರಗಳು

 

ಭಾರತದ ಐತಿಹಾಸಿಕ ಆಧಾರಗಳನ್ನು ಮುಖ್ಯವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು

1. ಪ್ರಾಕ್ತನ ಆಧಾರಗಳು

2. ಬರವಣಿಗೆಯ ಆಧಾರಗಳು

 

 

1.      ಪ್ರಾಕ್ತನ ಆಧಾರಗಳು

 

ಪ್ರಾಕ್ತನ ಆಧಾರಗಳು ಭಾರತದ ಇತಿಹಾಸದ ಪ್ರಮುಖ ಆಧಾರಗಳು, ಬರವಣಿಗೆಯ ಕಲೆ ಗೊತ್ತಿಲ್ಲದ ಶಿಲಾಯುಗದ ಅವಶೇಷಗಳಿಂದಿಡಿದು 12ನೇ ಶತಮಾನದ ಶಿಲಾ ಸ್ಮಾರಕಗಳವರೆಗೆ ಈ ಆಧಾರಗಳು ವ್ಯಾಪಿಸಿವೆ. ಲಿಖಿತ ಆಧಾರಗಳು ಲಭ್ಯವಿಲ್ಲದಾದಾಗ, ಅಳಿಸಿ ಹೋದಾಗ ಇತಿಹಾಸಕಾರನು ಈ ಆಧಾರಗಳ ನೆರವಿಗೆ ಆಶ್ರಯಿಸಬೇಕಾಗುತ್ತದೆ. ಭಾರತದ ಇತಿಹಾಸ ರಚನೆಯಲ್ಲಿ ಅನೇಕ ಕಗ್ಗಂಟುಗಳನ್ನು ಬಿಡಿಸಲು ಹಾಗೂ ಅಂಧಕಾರವನ್ನು ಹೋಗಲಾಡಿಸುವಲ್ಲಿ ಈ ಆಧಾರಗಳು ನೆರವಿಗೆ ಬಂದಿವೆ. ರೊಮಿಲಾಥಾಪರ್‌ರವರು ಪ್ರಾಕ್ತನಾಧಾರಗಳ ಮಹತ್ವದ ಬಗ್ಗೆ ಈ ಕೆಳಕಂಡಂತೆ ಹೇಳಿದ್ದಾರೆ. "ಪ್ರಾಚ್ಯ ಶೋಧನವು ಮೋಜಣಿ ಮತ್ತು ಉತ್ಪನನಗಳ ಮೂಲಕ ಶೋಧಿಸಿದ ಭೌತಿಕ ಅವಶೇಷಗಳ ರೂಪದಲ್ಲಿ ಸುಸ್ಪಷ್ಟವಾದ ಮತ್ತು ಮೂರು ಆಯಾಮಗಳುಳ್ಳ ಸಂಗತಿಗಳನ್ನು ಒದಗಿಸಿದೆ. ಈ ಸಂಗತಿಗಳು ಸಾಹಿತ್ಯಕ ಪ್ರಮಾಣಗಳನ್ನು ರುಜುವಾತು ಪಡಿಸುವುದಲ್ಲದೆ, ಕಾಲಗಣನೆಗೆ ಸಾಂಖ್ಯಿಕ ಆಧಾರಾಂಶವನ್ನು ಒದಗಿಸಿ ಭಾರತೀಯ ಇತಿಹಾಸದ ಪ್ರಾಚೀನ ಕಾಲದಲ್ಲಿನ ಬಿರುಕುಗಳನ್ನು ತುಂಬಲು ವಿಶೇಷ ಸಹಕಾರಿಯಾಗುತ್ತದೆ." ಸರ್ ವಿಲಿಯಂ ಜೋನ್ಸ್‌ರವರಿಂದ ಕ್ರಿ.ಶ. 1783ರಲ್ಲಿ ಕಲ್ಕತ್ತದಲ್ಲಿ ಸ್ಥಾಪಿತವಾದ 'ರಾಯಲ್ ಏಷ್ಯಾಟಿಕ್ ಸೊಸೈಟಿ'ಯು ಭಾರತೀಯರಿಂದ ದೀರ್ಘ ಕಾಲದಿಂದ ಕಣ್ಮರೆಯಾಗಿದ್ದ ಹಾಗೂ ಮನಃಪಟಲದಿಂದ ದೂರವಾಗಿದ್ದ ಅನೇಕ ಸ್ಮಾರಕಗಳು, ಶಾಸನಗಳು ಭಗ್ನಾವಶೇಷಗಳ ಬಗ್ಗೆ ಸಂಶೋಧನೆ ಕೈಗೊಂಡಿತು. ಜೇಮ್ಸ್ ಪ್ರಿನ್ಸೆಪ್ ಅಶೋಕನ ಹಲವು ಶಾಸನಗಳನ್ನು ಓದಿ ವಿಷ್ಯಾಟಿಕ್ ಸೊಸೈಟಿಯ ಪತ್ರಿಕೆಯಲ್ಲಿ ಪ್ರಕಟಿಸಿದ. ಇವನ ಈ ಪ್ರಯತ್ನದಿಂದಾಗಿ ಬ್ರಾಹಿ ಲಿಪಿಯನ್ನು ಯಶಸ್ವಿಯಾಗಿ ಅರ್ಥಮಾಡಿಕೊಳ್ಳಲಾಯಿತು. ಅಲ್ಲದೆ ಖರೋಷ್ಠಿ ಲಿಪಿಯ ನಿಗೂಢತೆಯನ್ನು ಅರಿಯಲಾಯಿತು. ದಯಾರಾಂ ಸಹಾನಿ ಮತ್ತು ಆ‌ರ್.ಡಿ. ಬ್ಯಾನರ್ಜಿಯವರು ಕಂಡುಹಿಡಿದ ಹರಪ್ಪ ಹಾಗೂ ಮಹೆಂಜೋದಾರೊ ನಿವೇಶನಗಳ ಬಗ್ಗೆ 1924ರಲ್ಲಿ ಸರ್‌ಜಾನ್ ಮಾರ್ಷಲನು ಲಂಡನ್ನಿನ ವಾರಪತ್ರಿಕೆಯಲ್ಲಿ ಪ್ರಕಟಿಸಿದ್ದರಿಂದಾಗಿ ಭಾರತದ ಇತಿಹಾಸ 3000 ವರ್ಷಗಳಷ್ಟು ಪ್ರಾಚೀನ ಇತಿಹಾಸ ಹೊಂದಿತು. ಹುಲಿಯ ಬೇಟೆಯಾಡಲು ಹೋದ ಬ್ರಿಟಿಷ್ ಬೇಟೆಗಾರರಿಂದಾಗಿ ಭಾರತೀಯರ ಜನ ಸಂಪರ್ಕದಿಂದಲೇ ದೂರವಾಗಿದ್ದ ಅಜಂತ ಗುಹೆಗಳ ಮನಮೋಹಕ, ವಿಶ್ವದಲ್ಲೇ ಸೌಂದರ್ಯದಿಂದ ಕೂಡಿದ ಚಿತ್ರಕಲೆ ಬೆಳಕಿಗೆ ಬಂದಿತು.

 

ಭಾರತದಲ್ಲಿ ಸ್ಥಾಪಿತವಾದ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಉರುಳಿಸಲು ಭಾರತೀಯರು ಮಾಡಿದ 1857ರ ಪ್ರಯತ್ನದಿಂದಾಗಿ ಹಾಗೂ ನಂತರ ಬೆಳೆಯುತ್ತಾ ಹೋದ ಬ್ರಿಟಿಷ್ ವಿರೋಧಿ ಮನೋಭಾವನೆಯಿಂದಾಗಿ ಬ್ರಿಟಿಷರು ಭಾರತೀಯರ ಸಾಮಾಜಿಕ, ಧಾರ್ಮಿಕ, ಆಚಾರ-ವಿಚಾರ, ಆಡಳಿತ ಮುಂತಾದ ಇತಿಹಾಸವನ್ನು ಅರಿಯಲು ಆಸಕ್ತಿ ವಹಿಸಿದರು. ಪ್ರಾಕ್ತನ ಸಂಶೋಧನೆ ಹಾಗೂ ಸಂಗ್ರಹಣೆಯಲ್ಲಿ ಆಸಕ್ತಿಯಿದ್ದ ಕನ್ನಿಂಗ್‌ ಹ್ಯಾಮ್‌ ನನ್ನು 1862ರಲ್ಲಿ ಪ್ರಾಕ್ತನ ಇಲಾಖೆಯ ಅಧಿಕಾರಿಯಾಗಿ ನೇಮಿಸಲಾಯಿತು. ಲಾರ್ಡ್‌ಜ್ರನ್ 1906 ರಲ್ಲಿ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಶಾಸನ (The ancient monuments preservation Act) ವನ್ನು ಜಾರಿಗೊಳಿಸಿದನು. ಅಲ್ಲದೆ ಪ್ರತ್ಯೇಕವಾದ ಪುರಾತತ್ವ ಇಲಾಖೆಯನ್ನು ಸ್ಥಾಪಿಸಿ ಸರ್‌ಜಾನ್ ಮಾರ್ಷಲ್‌ನನ್ನು ಅದರ ಮುಖ್ಯಸ್ಥನನ್ನಾಗಿ ನೇಮಿಸಿದನು. ಈ ಸಂಸ್ಥೆಯ ಸ್ಥಾಪನೆಯೊಂದಿಗೆ ಹಾಗೂ ವಿದೇಶಿ ಮತ್ತು ದೇಶೀಯ ಸಂಶೋಧಕರ ಆಸಕ್ತಿಯಿಂದಾಗಿ ಅನೇಕ ಐತಿಹಾಸಿಕ ನಾಗರಿಕತೆಗಳು, ಸ್ಮಾರಕಗಳು ಬೆಳಕಿಗೆ ಬಂದವು.

 

ಕ್ರಮಬದ್ಧ ಅಧ್ಯಯನಕ್ಕಾಗಿ ಪ್ರಾಕ್ತನಾಧಾರಗಳನ್ನು 4 ವಿಭಾಗಗಳನ್ನಾಗಿ ವಿಂಗಡಿಸಿಕೊಳ್ಳಬಹುದು.

ಅವುಗಳು :-

1. ಭೂ ಉತ್ಪನನ,

 2. ಶಾಸನಗಳು,

3. ನಾಣ್ಯಗಳು

4. ಸ್ಮಾರಕಗಳು

 

1.    ಭೂ ಉತ್ಪನನ :

ಭೂಮಿಯ ಒಳಪದರದಲ್ಲಿ ಅಡಗಿಹೋದ ಅವಶೇಷಗಳನ್ನು ಅಗೆದು ಸಂಶೋಧನೆ ಕೈಗೊಳ್ಳುವ ಕಾರ್ಯವೇ ಭೂ ಉತ್ಪನನ. ಭೂ ಉತ್ಪನನದಲ್ಲಿ ಎರಡು ವಿಧ. 1. ಸಮತಲ ಭೂ ಉತ್ಪನನ (Vertical excavation), 2. ಲಂಬ ಭೂ ಉತ್ಪನನ (Horizontal excavation), ಸಮತಲ ಭೂ ಉತ್ಪನನವು ಕಾಲಾನುಕ್ರಮಣಿಕೆ ಹಾಗೂ ನಿವೇಶನದ ಭೂ ವಿಸ್ತಾರವನ್ನು ತಿಳಿಸುತ್ತದೆ. ಲಂಬ ಭೂ ಉತ್ಪನನವು ಭೂಮಿಯ ಒಳ ಪದರದ ಸಂಶೋಧನೆಗೆ ಆಳವಾಗಿ ಅಗೆಯುವುದಾಗಿದೆ. ಇದರಿಂದ ನಿವೇಶನದಲ್ಲಿ ಹಂತ ಹಂತದ ನಾಗರಿಕತೆಗಳು ಹೇಗೆ ಸಾಗಿ ಬಂದಿವೆ ಅಥವಾ ನಾಗರಿಕತೆಯು ಅನೇಕ ಬಾರಿ ನಾಶಗೊಂಡು ಪುನರ್ ನಿರ್ಮಿಸಲ್ಪಟ್ಟಿತೆ ಎಂಬಂತಹ ಅನೇಕ ಅಂಶಗಳು ತಿಳಿದುಬರುತ್ತವೆ.

 

ಪ್ರಾಚೀನ ಅವಶೇಷಗಳು ಅಳಿಯದೇ ಉಳಿದಿರುವುದರಲ್ಲಿ ಹವಾಮಾನದ ಪ್ರಭಾವವು ಕಾರಣವಾಗುತ್ತದೆ. ಉಷ್ಣ ವಲಯದಲ್ಲಿರುವ, ಒಣ ಹವೆ ಹಾಗೂ ಕಡಿಮೆ ಮಳೆ ಬೀಳುವ ಪಶ್ಚಿಮ ಉತ್ತರ ಪ್ರದೇಶ, ರಾಜಸ್ತಾನ ಮತ್ತು ವಾಯುವ್ಯ ಭಾರತದ ಅವಶೇಷಗಳು ಹೆಚ್ಚು ಸುರಕ್ಷಿತ ಸ್ಥಿತಿಯಲ್ಲಿ ದೊರೆತಿವೆ. ಆದರೆ ತೇವಾಂಶದಿಂದ ಕೂಡಿದ ಗಂಗಾ ನದಿ ಬಯಲು ಪ್ರದೇಶ ಮತ್ತು ನದಿ ಮುಖಜ ಪ್ರದೇಶದಲ್ಲಿನ ಆವಶೇಷಗಳು ತುಕ್ಕು ಹಿಡಿದು, ಸವೆದು ಗುರುತಿಸಲಾಗದಂತಾಗಿ ಸಂಶೋಧನೆಗೆ ಅನುಪಯುಕ್ತವಾಗಿವೆ.

 

ಭೂ ಉತ್ಪನನದಲ್ಲಿ ದೊರಕಿದ ಅವಶೇಷಗಳು ಮತ್ತು ಪಳೆಯುಳಿಕೆಗಳನ್ನು ವೈಜ್ಞಾನಿಕ ಪ್ರಯೋಗಗಳ ಮೂಲಕ ಅವುಗಳ ಕಾಲವನ್ನು ನಿರ್ಣಯಿಸಲಾಗುತ್ತದೆ. ಈ ವೈಜ್ಞಾನಿಕ ಕ್ರಮವನ್ನು ಕಾರ್ಬನ್ 14 (C-14) ಪದ್ಧತಿ ಎನ್ನುವರು. ಕಾರ್ಬನ್ 14ರ ವಿಧಾನವೂ ನಿಖರವಾದ ಕಾಲ ನಿರ್ಣಯ ನೀಡುವುದಿಲ್ಲವೆಂಬ ಕಾರಣದ ಮೇಲೆ ಇತ್ತೀಚೆಗೆ ಪೊಟ್ಯಾಷಿಯಂ ವಿಧಾನ' ಎಂಬ ಹೊಸ ವಿಧಾನದಲ್ಲಿ ಕಾಲಮಾನವನ್ನು ನಿರ್ಧರಿಸಲಾಗುತ್ತಿದೆ.

 

ಸಿಂಧೂ ಬಯಲಿನ ನಾಗರಿಕತೆಯ ಹರಪ್ಪ ನಿವೇಶವನ್ನು 1921ರಲ್ಲಿ ದಯಾರಾಂಸಾಕ್ಷಿ ಮತ್ತು 1922ರಲ್ಲಿ ಆರ್.ಡಿ. ಬ್ಯಾನರ್ಜಿಯವರು ಮಹೆಂಜೊದಾರೋವನ್ನು ಉತ್ಪನನ ಮಾಡಿ ಶೋಧಿಸಿದರು. ಈ ಶೋಧನೆಯ ಅಂಶವನ್ನು ಸರ್ ಜಾನ್‌ ಮಾರ್ಷಲ್‌ರವರು 1924ರಲ್ಲಿ ಲಂಡನ್ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಸಂಶೋಧನೆಯ ಗುದ್ದಲಿಯ ಒಂದು ಹೊಡೆತಕ್ಕೇನೆ ಭಾರತದ ಇತಿಹಾಸ 3000 ವರ್ಷಗಳಷ್ಟು ಹಿಂದಕ್ಕೆ ಚಿಮ್ಮಿತು. ಇತ್ತೀಚೆಗೆ 1990-91ರಲ್ಲಿ ದೊಲವೀರ ಎನ್ನುವ ಹೊಸ ನೆಲೆಯನ್ನು ಜೆ.ಪಿ. ಜೋಷಿ ಮತ್ತು ಆರ್.ಎಸ್. ಬಿಷ್ ಸಂಶೋಧಿಸಿದ್ದಾರೆ. ಕನ್ನಿಂಗ್ ಹ್ಯಾಮ್ ಮತ್ತು ಸರ್‌ಜಾನ್‌ ಮಾರ್ಷಲ್‌ರವರ ನೇತೃತ್ವಗಳಲ್ಲಿ ತಕ್ಷಶಿಲೆ, ಬುದ್ದಗಯಾ, ಸಾರಾನಾಥ ಮುಂತಾದ ಕಡೆಗಳಲ್ಲಿ ಮಾಡಿದ ಭೂ ಉತ್ಪನನ ಕಾರ್ಯದಿಂದಾಗಿ ಅಜ್ಞಾತವಾದ ಈ ಸ್ಥಳಗಳು ಬೆಳಕಿಗೆ ಬಂದವು. ಡಾ| ಸ್ಪೂನರ್‌ರವರು ನಳಂದ ಹಾಗೂ ತಕ್ಷಶಿಲೆಯ ನಿವೇಶನಗಳಲ್ಲಿ ಮಾಡಿದ ಶೋಧಗಳು ಅನೇಕ ಹೊಸ ವಿಷಯಗಳನ್ನು ಬೆಳಕಿಗೆ ತಂದವು. ಇದರಿಂದಾಗಿ ಕನಿಷ್ಠನ ವಂಶಾವಳಿಯು ಸಾಹಿತ್ಯಾಧಾರಗಳನ್ನು ಅಲ್ಲಗಳೆದು ಸಾಕಷ್ಟು ಗೊಂದಲಮಾಡಿದ್ದುದನ್ನು ಇವು ಹೋಗಲಾಡಿಸಿ ಕುಶಾನರಲ್ಲಿ ಕನಿಷ್ಠ ಸಂಬಂಧಿ ರಾಜರುಗಳಿಗಿಂತ ಕಾಡ್ ಫೈಸಸ್ ಸಂಬಂಧಿ ರಾಜರುಗಳೇ ಮಹತ್ವಪೂರ್ಣರಾದವರೆಂದು ಸಿದ್ಧ ಮಾಡಿವೆ. ಡಾ| ಸ್ಪೂನರ್ ಪಾಟಲಿಪುತ್ರ (ಪಾಟ್ನಾ)ವನ್ನು ಉತ್ಪನನ ಮಾಡಿದುದರಿಂದ ಮೌರ್ಯರ ರಾಜಧಾನಿಯ ಸ್ಪಷ್ಟ ಚಿತ್ರಣ ದೊರೆತಿದೆ. ಇದೇ ನಿಟ್ಟಿನಲ್ಲಿ ಎಚ್.ಡಿ. ಸಂಕಾಲಿಯಾರವರ ನರ್ಮದಾ ಮತ್ತು ಸಬರಮತಿ ನದಿ ಪ್ರದೇಶದ ಭೂ ಉತ್ಪನನಗಳು ಇತಿಹಾಸ ಪೂರ್ವಕಾಲದ ಹೊಸ ವಿಷಯಗಳನ್ನು ಹೊರಗೆಡವಿವೆ. ಹಾಗೆಯೇ ಚಂದ್ರವಳ್ಳಿ, ಬ್ರಹ್ಮಗಿರಿ, ಅಮರಾವತಿ, ನಾಗಾರ್ಜುನಕೊಂಡ, ರೂಪಾರ್, ಮಸ್ಕಿ, ಪೈಠಾಣ್‌ಳಲ್ಲಿನ ಭೂ ಉತ್ಪನನಕಾರ್ಯವು ಅನೇಕ ಬೌದ್ಧ ಕೇಂದ್ರಗಳು, ಅಶೋಕನ ಕಾರ್ಯಸ್ಥಾನಗಳು ಮುಂತಾದವುಗಳ ಬಗ್ಗೆ ವಿಷಯ ತಿಳಿಸಿವೆ. ಅಂತೆಯೇ ಗುಪ್ತರ ಕಲೆಯ ಬಗ್ಗೆ ಝಾನ್ಸಿ ಬಳಿಯ ದಿಯೋಗಾಂವ್ ಮತ್ತು ಕಾನ್ಸುರದ ಹತ್ತಿರದಲ್ಲಿರುವ ಬಿಟ್ರಿಗಾಂವ್‌ಳಲ್ಲಿನ ಸ್ಮಾರಕಗಳು ತಿಳಿಸುತ್ತವೆ.

 

ದಕ್ಷಿಣ ಭಾರತದ ಮಧುರೈ, ತಿನ್ನವೇಲಿ, ಚಂದ್ರಗಿರಿ, ಅರಿಕಮೇಡು ಮುಂತಾದ ನಿವೇಶನಗಳಲ್ಲಿ ನಡೆಸಿದ ಸಂಶೋಧನೆಯಿಂದ ಶಿಲಾಯುಗ ಮತ್ತು ಲೋಹಯುಗದ ಮಾನವ ಇರುವಿಕೆಯ ಮೊದಲ ಸುಳಿವುಗಳ ಬಗ್ಗೆ ಮಾಹಿತಿ ದೊರೆತಿದೆ. ಕರ್ನಾಟಕದ ತಲಕಾಡಿನಲ್ಲಿ ನಡೆಯುತ್ತಿರುವ ಭೂ ಉತ್ಪನದಿಂದಾಗಿ ಪೂರ್ವ ಇತಿಹಾಸದ ಮಾನವನ ಚಟುವಟಿಕೆಗಳ ಬಗ್ಗೆ, ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗಿನ ವಾಣಿಜ್ಯ ಸಂಬಂಧದ ಬಗ್ಗೆ ಮಾಹಿತಿ ದೊರೆತಿವೆ.

 

ಪ್ರಪಂಚದಲ್ಲೇ ಬೃಹತ್ ದೇವಾಲಯವಾದ ಅಂಗೋರ್ ವಾಟ್ (ಕಾಂಬೋಡಿಯಾ) ಬೋರೊಬುದುರ್‌ (ಜಾವಾ)ನ ಸ್ಮಾರಕಗಳ ಸಂಶೋಧನೆಯಿಂದಾಗಿ ಭಾರತ ಹಾಗೂ ಆನ್ನೇಯ ಏಷ್ಯಾ ದೇಶಗಳ ನಡುವಿನ ರಾಜಕೀಯ, ಸಾಂಸ್ಕೃತಿಕ ಸಂಬಂಧಗಳು ತಿಳಿದುಬಂದವು. ಹೀಗೆ ಭೂ ಉತ್ಪನದಿಂದಾಗಿ ಕಂಡು ಬಂದ ಶೋಧಗಳು ಭಾರತದ ಇತಿಹಾಸ ರಚನೆಯಲ್ಲಿ ಬಹು ಉಪಯುಕ್ತ ಮಾಹಿತಿಗಳಾಗಿವೆ.

 

2.                   ಶಾಸನಗಳು :

ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳು ಬಹು ಅಮೂಲ್ಯವಾದ ಆಧಾರಗಳು. ಶಾಸನಗಳ ವ್ಯವಸ್ಥಿತ ಅಧ್ಯಯನದ ಶಾಖೆಗೆ ಶಾಸನ ಶಾಸ್ತ್ರ (Epigraphy)ವೆಂದು ಕರೆಯುತ್ತಾರೆ. ಭಾರತದಲ್ಲಿ ಸುಮಾರು 75,000ಕ್ಕೂ ಹೆಚ್ಚು ಶಾಸನಗಳು ದೊರೆತಿವೆ. ಈ ಶಾಸನಗಳು ಸಂಸ್ಕೃತ, ಪಾಳಿ, ಪ್ರಾಕೃತ, ತಮಿಳು, ತೆಲುಗು, ಕನ್ನಡ ಮುಂತಾದ ಭಾಷೆಗಳಲ್ಲಿ ರಚನೆಯಾಗಿವೆ ಹಾಗೂ ಬ್ರಾಹ್ಮ, ಖರೋಷ್ಠಿ ಲಿಪಿಗಳನ್ನು ಬಳಸಲಾಗಿದೆ. ಈ ಶಾಸನಗಳು ಬಂಡೆಗಳ ಮೇಲೆ, ಕಲ್ಲುಸ್ತಂಭಗಳ ಮೇಲೆ ಮತ್ತು ಸುಟ್ಟಮಣ್ಣಿನ ಮುದ್ರೆಗಳು ಮುಂತಾದ ಚಿರಸ್ಥಾಯಿ ವಸ್ತುಗಳ ಮೇಲೆ ಕೊರೆಯಲ್ಪಟ್ಟಿವೆ. ದೊರೆತಿರುವ ಪ್ರಾಚೀನ ಶಾಸನಗಳಲ್ಲಿ ಸಿಂಧೂ ನದಿ ನಾಗರಿಕತೆಯ ಮುದ್ರೆಗಳು ಬಹು ಪ್ರಾಚೀನವಾದವು ಹಾಗೂ ಚಿತ್ರಗಳಿಂದ ಕೂಡಿದ ಆ ಶಾಸನಗಳನ್ನು ಇನ್ನೂ ಓದಲಾಗಿಲ್ಲ. ಓದಲಾಗಿರುವ ಅತಿ ಪ್ರಾಚೀನ ಶಾಸನಗಳಲ್ಲಿ ಅಶೋಕನ ಶಾಸನಗಳು ಬಹು ಮುಖ್ಯವಾದವು. ಭಾರತೀಯ ಇತಿಹಾಸಜ್ಞರು ಅನೇಕ ವರ್ಷಗಳ ಕಾಲ ಪಿಪ್ರವಾದಲ್ಲಿ ದೊರೆತ ಶಾಸನವೇ ಭಾರತದ ಶಾಸನಗಳಲ್ಲಿ ಅತಿ ಪ್ರಾಚೀನವಾದುದೆಂದು ನಂಬಿದ್ದರು. ಆದರೆ ಪ್ರಾಕ್ತನ ಸಂಶೋಧನೆಯ ಸಾಧನೆಯ ಫಲವಾಗಿ ಆದು ತಪ್ಪೆಂದು ಸಾಧಿತವಾಗಿ ಸೊಹಾರ್ ಶಾಸನವು ಭಾರತದ ಶಾಸನಗಳಲ್ಲಿ ಅತಿ ಪ್ರಾಚೀನವಾದುದೆಂದು ಇಂದು ನಂಬಲಾಗಿದೆ. ಸೊಹ್ಯಾರ್ ಶಾಸನವು ಅಶೋಕನ ಶಾಸನಗಳಿಗಿಂತ ಸುಮಾರು 50 ವರ್ಷಗಳಷ್ಟು ಹಳೆಯದು ಎಂದು ಭಾವಿಸಲಾಗಿದೆ. ಅಶೋಕನು ಕೊರೆಸಿದ ಬಹುಸಂಖ್ಯಾತ ಶಾಸನಗಳು ಭಾರತದ ವಿವಿಧ ಮೂಲೆಯಲ್ಲಿ ದೊರೆತು ಅವನ ಕಾಲದ ಇತಿಹಾಸವನ್ನು ಅರಿಯಲು ಬಹು ಉಪಯುಕ್ತವಾಗಿವೆ. ಅಶೋಕನ 14 ಶಿಲಾ ಶಾಸನಗಳು, 7 ಗೌಣ ಶಿಲಾಶಾಸನಗಳು, ಕಳಿಂಗದ ಎರಡು ಶಾಸನಗಳು ದೊರೆತಿವೆ. ಆಶೋಕನು ತನ್ನ ಶಾಸನಗಳು ಸ್ಥಳೀಯರಿಗೆ ಅರ್ಥವಾಗಲೆಂಬ ದೃಷ್ಟಿಯಿಂದ ದಕ್ಷಿಣ ಭಾರತದ ಶಾಸನಗಳನ್ನು ಬ್ರಾಡ್ಮಿ ಲಿಪಿಯಲ್ಲೂ, ಮನೇರ ಮತ್ತು ಷಹಬಾಜ್‌ಘರಿಗಳಲ್ಲಿನ ಶಾಸನಗಳನ್ನು ಖರೋಷ್ಠಿ ಲಿಪಿಯಲ್ಲೂ ಕೊರೆಸಿದ್ದಾನೆ. ಈ ಶಾಸನಗಳಲ್ಲಿ ಅಶೋಕನು ತನ್ನ ನೇರವಾದ ಮಾತುಗಳಿಂದ ಅಹಿಂಸೆ. ಧರ್ಮ, ನೀತಿಯ ಉತ್ತಮ ಉಪದೇಶ ಮತ್ತು ಆಚರಣೆಯನ್ನು ತನ್ನ ಪ್ರಜಾಜನರಿಗೂ, ಮಾನವ ಕುಲಕ್ಕೂ ಹೃದಯಂಗಮವಾಗಿ ಬೋಧಿಸಿದ್ದಾನೆ. ಇವನು ತನ್ನ ಶಾಸನಗಳ ಮೂಲಕ ರಜ್ಜುಕ ಎಂಬ ಅಧಿಕಾರಿಗಳಿಗೆ ತನ್ನ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕೆಂದು ತಿಳಿಸುತ್ತಾನೆ. ಈ ಶಾಸನಗಳ ಮೂಲಕ ಅಶೋಕನ ಮಹಾ ವ್ಯಕ್ತಿತ್ವ, ಧರ್ಮ, ಸಾಮ್ರಾಜ್ಯದ ಭವ್ಯ ಸ್ವರೂಪ, ಅವನ ಸಾಮ್ರಾಜ್ಯದ ವ್ಯಾಪ್ತಿ, ಆಡಳಿತ ಪದ್ಧತಿ, ಆತನ ಸುಧಾರಣೆಗಳು, ಯೋಜನೆಗಳು ಮುಂತಾದ ಅಂಶಗಳು ತಿಳಿದು ಬರುತ್ತವೆ. 1825 ರಿಂದ ಸಂಶೋಧಿಸಲ್ಪಟ್ಟ ಅಶೋಕನ ಅನೇಕ ಶಾಸನಗಳು ಆಶೋಕನನ್ನು "ದೇವನಾಂಪಿಯ" ಮತ್ತು "ಪ್ರಿಯದರ್ಶಿ" ಎಂದು ಕರೆಯಲ್ಪಟ್ಟವಾಗಿದ್ದವು. ಆದರೆ ಈ ಯಾವ ಶಾಸನಗಳೂ ಅಶೋಕನ ಹೆಸರನ್ನು ಒಳಗೊಂಡಿರದಿದ್ದುದರಿಂದ ದೇವನಾಂಪಿಯ ಮತ್ತು ಪ್ರಿಯದರ್ಶಿ ಯಾರೆಂಬ ಬಗ್ಗೆ ಜಿಜ್ಞಾಸೆಯಿತ್ತು, ಆದರೆ 1915ರಲ್ಲಿ ದೊರಕಿದ ರಾಯಚೂರು ಜಿಲ್ಲೆಯ ಮಸ್ಕಿ ಶಾಸನವು "ದೇವನಾಂಪಿಯ ಆಶೋಕ" ಎಂಬುದಾಗಿ ಹೆಸರನ್ನು ಸೂಚಿಸುವ ಮೂಲಕ ಅಶೋಕನ ಹೆಸರಿನ ಬಗ್ಗೆ ಇದ್ದ ಸಂಶಯ ನಿವಾರಣೆಯಾಯಿತು. ಮಧ್ಯಪ್ರದೇಶದ ಗುರ್ಜಾ ಎಂಬ ಹಳ್ಳಿಯಲ್ಲಿ ಬಿ.ಸಿ. ಚಬ್ರಾರವರಿಂದ ಕಂಡುಹಿಡಿಯಲ್ಪಟ್ಟ ಅಶೋಕನ ಗುಜರಾ ಶಾಸನವು "ದೇವನಾಂಪಿಯಸ ಪ್ರಿಯದರ್ಸನೊ ಅಶೋಕ ರಾಜಸ" ಎಂದು ಅಶೋಕನ ಹೆಸರು ಹಾಗೂ ಅವನ ಬಿರುದುಗಳನ್ನೆಲ್ಲಾ ಒಳಗೊಂಡಿರುವಂತಹ ಶಾಸನವು ದೊರೆತಿದ್ದು ಅಶೋಕನನ್ನು ಗುರುತಿಸುವ ಬಗ್ಗೆ ಇದ್ದ ಜಿಜ್ಞಾಸೆ ತಪ್ಪಿತು. ಹೀಗೆ ಚಾರಿತ್ರಿಕ ದೃಷ್ಟಿಯಿಂದ ಅಶೋಕನ ಶಾಸನಗಳಿಗೆ ಮಹತ್ವವಿದ್ದು ಕತ್ತಲೆಯಲ್ಲಿದ್ದ ಪ್ರಾಚೀನ ಭಾರತದ ಇತಿಹಾಸಕಾರನನ್ನು ಬೆಳಕಿನೆಡೆಗೆ ಕೊಂಡೊಯ್ಯುವ ದಾರಿ ದೀಪಗಳಾಗಿವೆ. ಆದ್ದರಿಂದ ಅಶೋಕನನ್ನು “ಶಿಲಾಶಾಸನದ ಪಿತಾಮಹಾ" ಎಂದು ಕರೆಯಲಾಗಿದೆ.

 

ಪ್ರಾಚೀನ ಭಾರತದ ಶಾಸನಗಳು ಒಳಗೊಂಡಿರುವ ವಿಷಯಗಳ ಆಧಾರದ ಮೇಲೆ ಅವುಗಳನ್ನು 1. ಐತಿಹಾಸಿಕ, 2. ಧಾರ್ಮಿಕ, 3. ದಾನ ಸಂಬಂಧಿ ಅಥವಾ ದತ್ತಿ ಶಾಸನಗಳು, 4. ಸ್ಮರಣಾರ್ಥ ಶಾಸನಗಳು ಎಂದು ವಿಭಾಗಿಸಲಾಗಿದೆ. ಇಂತಹ ಶಾಸನಗಳು ವ್ಯಕ್ತಿಗಳಿಗೆ ಕೊಟ್ಟ ದಾನದತ್ತಿಯ ವಿವರಗಳು, ದೇವತಾ ಪ್ರತಿಷ್ಠಾಪನೆ, ಭೂ ಉಂಬಳಿ ನೀಡಿದ ವಿವರಗಳನ್ನು ನೀಡುತ್ತವೆ. ಅಲ್ಲದೆ ಈ ಶಾಸನಗಳು ರಾಜಮಹಾರಾಜರ, ಆಡಳಿತಾಧಿಕಾರಿಗಳ, ಜನಸಾಮಾನ್ಯರ ರಾಜಕೀಯ, ಧಾರ್ಮಿಕ, ಸಾಮಾಜಿಕ, ಕಲೆ ಸಾಹಿತ್ಯ ಮುಂತಾದ ವಿವರಗಳನ್ನು ನೀಡುತ್ತವೆ.

 

ಸಮಕಾಲೀನ ಭೌಗೋಳಿಕ, ಆಡಳಿತಾತ್ಮಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸ್ಥಿತಿಯನ್ನು ತಿಳಿಸುವ ಜೊತೆಗೆ ವಂಶಾವಳಿಗಳ ಬಗ್ಗೆ ವಿಪುಲ ಮಾಹಿತಿಯನ್ನು ನೀಡುವ, ಐತಿಹಾಸಿಕ ದೃಷ್ಟಿಯಿಂದ ನೋಡುವುದಾದರೆ ಅನುಮಾನಕ್ಕೆ ಆಸ್ಪದವಿಲ್ಲದಂತಹ ಅನೇಕ ಅಪೂರ್ವವಾದ ಶಾಸನಗಳು ದೊರೆತಿವೆ. ಮೌರ್ಯರ ಕಾಲದ ನಂತರದ ಶಾಸನಗಳನ್ನು ಸರ್ಕಾರದಿಂದ ಹೊರಡಿಸಿದ ಅಧಿಕೃತ ಶಾಸನಗಳು ಹಾಗೂ ವೈಯಕ್ತಿಕ ಅಥವಾ ಸಾರ್ವಜನಿಕ ಶಾಸನಗಳೆಂದು ವಿಂಗಡಿಸಲಾಗಿದೆ.

 

ಪ್ರಾಚೀನ ಭಾರತದ ಕೆಲವು ಪ್ರಮುಖ ಶಾಸನಗಳು

 

1. ಒರಿಸ್ಸಾದ ಭುವನೇಶ್ವರದ ಬಳಿಯಿರುವ ಉದಯಗಿರಿ ಬೆಟ್ಟಗಳಲ್ಲಿರುವ ಹಾಥಿಗಾಂಫಾ ಎಂಬ ಗುಹೆಯಲ್ಲಿರುವ ಕ್ರಿ.ಪೂ. ಒಂದನೇ ಶತಮಾನದ ಶಾಸನವು ಕಳಿಂಗದ ದೊರೆ ಖಾರವೇಲನ ಜೀವನ ಚರಿತ್ರೆ, ದಿಗ್ವಿಜಯ, ಅವನ ಆಳ್ವಿಕೆಗೆ ಸಂಬಂಧಿಸಿದ ಅನೇಕ ವಿವರಗಳನ್ನು ತಿಳಿಸುವ ಪ್ರಮುಖ ಶಾಸನವಾಗಿದೆ. ಪ್ರಾಕೃತ ಭಾಷೆಯಲ್ಲಿ, ಬ್ರಾಡ್ಮಿ ಲಿಪಿಯಲ್ಲಿ ಬರೆಯಲ್ಪಟ್ಟಿರುವ ಈ ಶಾಸನವು ಮೌರ್ಯರ ಆನಂತರದ ಕಳಿಂಗ ದೇಶದ ಇತಿಹಾಸವನ್ನು ತಿಳಿಸುವ ಲಭ್ಯವಿರುವ ಏಕೈಕ ಶಾಸನವಾಗಿದೆ.

 

2. ಗುಜರಾತಿನ ಜುನಾಘಡದ ಬಳಿ ದೊರೆತ ಗಿರ್ನಾರ್ ಶಾಸನವು ಶಕ ಮಹಾಕ್ಷತ್ರಪನಾದ ರುದ್ರದಾಮನು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ನಿರ್ಮಿತವಾದ ಕೃಷಿಗೆ ಉಪಯುಕ್ತವಾದ ಸುದರ್ಶನ ಎಂಬ ದೊಡ್ಡ ಅಣೆಕಟ್ಟೆಯು ಅತಿವೃಷ್ಟಿಯಿಂದಾಗಿ ಒಡೆದು ನಿಷ್ಟ್ರಯೋಜಕವಾದಾಗ ಅದನ್ನು ಜೀರ್ಣೋದ್ಧಾರ ಮಾಡಿ ಭದ್ರಗೊಳಿಸಿದ ಸಂದರ್ಭದಲ್ಲಿ ಈ ಶಾಸನವನ್ನು ಬರೆಸಿದನು. ಈ ಶಾಸನವು ಸುದರ್ಶನ ಸರೋವರದ ಇತಿಹಾಸವನ್ನು ತಿಳಿಸುತ್ತಾ ಅಂದಿನ ರಾಜಕೀಯ ಸ್ಥಿತಿಗೆ ಸಂಬಂಧಿಸಿದ ಅನೇಕ ವಿವರಗಳನ್ನು ತಿಳಿಸುತ್ತದೆ. ಅನಂತರ ಕ್ರಿ. ಶ. 5ನೇ ಶತಮಾನದಲ್ಲಿ ಗುಪ್ತ ದೊರೆ ಸ್ಕಂಧಗುಪ್ತನ ಕಾಲದಲ್ಲಿ ಈ ಕೆರೆಯು ಮತ್ತೆ ದುರಸ್ಥಿಗೊಳಗಾದಾಗ ಸ್ಕಂದಗುಪ್ತನು ರುದ್ರದಾಮನ ಶಾಸನದ ಬಂಡೆಯ ಕೆಳಗಡೆ ಈ ವಿವರಗಳನ್ನೊಳಗೊಂಡ ಶಾಸನವನ್ನು ಕೆತ್ತಿಸಿದ್ದಾನೆ. ಈ ಶಾಸನಗಳನ್ನು ಅದರ ಕರ್ತೃವು "ಸುದರ್ಶನ ತಟಾಕ ಸಂಸ್ಕಾರ ಗ್ರಂಥ"ವೆಂದು ವರ್ಣಿಸಿದ್ದಾನೆ. ಈ ಎರಡು ಶಾಸನಗಳೂ ಮೌರ್ಯರ ಕಾಲದಿಂದ ಗುಪ್ತರ ಕಾಲದವರೆಗಿನ ಅನೇಕ ಐತಿಹಾಸಿಕ ಅಂಶಗಳನ್ನು ಉಲ್ಲೇಖಿಸುತ್ತವೆ.

 

3. ಸಮುದ್ರಗುಪ್ತನು ಕೆತ್ತಿಸಿದ ಅಲಹಾಬಾದ್ ಸ್ತಂಭ ಶಾಸನವು ಗುಪ್ತರ ಚರಿತ್ರೆ ಮತ್ತು ಸಮುದ್ರ ಗುಪ್ತನ ದಂಡಯಾತ್ರೆಯ ಬಗ್ಗೆ ವಿಫುಲ ಮಾಹಿತಿಯನ್ನೊದಗಿಸುತ್ತದೆ. ಇದನ್ನು ಸಮುದ್ರಗುಪ್ತನು ತನ್ನ ದಿಗ್ವಿಜಯಗಳನ್ನು ಮುಗಿಸಿ ಹಿಂತಿರುಗುವಾಗ ಹಿಂದೆ ಅಶೋಕನಿಂದ ಕೌಸಾಂಬಿಯಲ್ಲಿ ಸ್ಥಾಪಿತವಾಗಿದ್ದ ಸ್ತಂಭ ಶಾಸನದ ಮೇಲೆ ತನ್ನ ವಿಜಯಗಳನ್ನು ಕೆತ್ತಿಸಿದನು. ಫಿರೋಜ್ ಷಾ ತುಘಲಕನು ಇದನ್ನು ಅಲಹಾಬಾದಿಗೆ ಸಾಗಿಸಿದನು. ಈ ಶಾಸನವು ಸಂಸ್ಕೃತದಲ್ಲಿದ್ದು ಸಮುದ್ರಗುಪ್ತನ ಮಹಾದಂಡನಾಯಕನಾದ ಹರಿಸೇನನಿಂದ ರಚಿತವಾಗಿದೆ. ಈ ಶಾಸನವು ಒಂದೇ ಬೃಹತ್ ವಾಕ್ಯವಾಗಿದ್ದು 33 ಸಾಲುಗಳಿಂದ ಕೂಡಿದೆ.

 

4. ಐಹೊಳೆಯ ಮೇಗುತಿ ದೇವಾಲಯದಲ್ಲಿರುವ ಐಹೊಳೆ ಶಾಸನವು ಖ್ಯಾತ ಸಂಸ್ಕೃತ ಕವಿ ರವಿಕೀರ್ತಿಯಿಂದ ರಚಿತವಾದುದಾಗಿದೆ. ಇದು ಬಾದಾಮಿಯ ಚಾಲುಕ್ಯ ರಾಜರ ವೃತ್ತಾಂತವನ್ನು, ಎರಡನೇ ಪುಲಿಕೇಶಿಯ ದಿಗ್ವಿಜಯಗಳನ್ನು ಮನೋಹರವಾಗಿ ವರ್ಣಿಸುತ್ತದೆ. ಈ ಶಾಸನದಲ್ಲಿ ನಮೂದಿತವಾಗಿರುವ ಶಾಲಿವಾಹನ ಶಕ 556-634 ಎಂಬ ಸ್ಪಷ್ಟ ಕಾಲ ನಿರ್ದೇಶವು ಇತಿಹಾಸ ಲೇಖನದಲ್ಲಿ ಒಂದು ಮೈಲುಗಲ್ಲಾಗಿದೆ.

 

5. ಚಂದ್ರಗುಪ್ತ ವಿಕ್ರಮಾದಿತ್ಯನ ಬಗ್ಗೆ ವಿಪುಲ ಮಾಹಿತಿಯು ಮೆಹೌಲಿ ಕಬ್ಬಿಣದ ಸ್ತಂಭ ಶಾಸನದಿಂದ ದೊರೆಯುತ್ತದೆ. ಈ ಶಾಸನದಿಂದ ಚಂದ್ರಗುಪ್ತ ವಿಕ್ರಮಾಧಿತ್ಯನು ಬಂಗಾಳದ ಪ್ರಮುಖರನ್ನು ಮತ್ತು ವಹಿಕ ಬುಡಕಟ್ಟು ಜನಾಂಗವನ್ನು ಸೋಲಿಸಿದ ಬಗ್ಗೆ ತಿಳಿದು ಬರುತ್ತದೆ. ಹಾಗೆಯೇ ಬಸ್ತಾ, ಉದಯಗಿರಿ ಮತ್ತು ಸಾಂಚಿಯ ಶಾಸನಗಳು ಗುಪ್ತ ವಂಶದ ಬಗ್ಗೆ, ಆಡಳಿತದ ಬಗ್ಗೆ ಹೇರಳ ಮಾಹಿತಿಯನ್ನು ನೀಡುತ್ತವೆ.

 

6. ಚೋಳರ ದೊರೆಯಾದ ಒಂದನೇ ಪರಾಂತಕನ ಉತ್ತರಮೇರೂರು ತಾಮ್ರ ಶಾಸನವು ಚೋಳ ಸಾಮ್ರಾಜ್ಯದಲ್ಲಿದ್ದ ಸ್ಥಳೀಯ ಸರ್ಕಾರದ ಬಗ್ಗೆ ತಿಳಿಸುತ್ತಾ ಅಂದಿನ ಸ್ಥಳೀಯ ಸಂಸ್ಥೆಗಳ ಚುನಾವಣಾ ಪದ್ಧತಿ ಮತ್ತು ಗ್ರಾಮಸಭೆಗಳ ಕಾರ್ಯಕ್ರಮಗಳ ಬಗ್ಗೆ ವಿಸ್ತಾರವಾದ ಮಾಹಿತಿ ನೀಡುತ್ತದೆ.

 

7. ಪಲ್ಲವ ದೊರೆ ಮಹೇಂದ್ರವರ್ಮನ ಕುಡಿಮಿಯಾ ಮಲೈ ಶಾಸನವು ದಕ್ಷಿಣದ ಸಂಗೀತದ ರೀತಿ ನೀತಿಗಳ ಬೆಳವಣಿಗೆಯ ಬಗ್ಗೆ ತಿಳಿಸುತ್ತದೆ.

 

8. ಗ್ವಾಲಿಯರ್‌ನ ಪ್ರಶಸ್ತಿ ಶಾಸನವು ಹೆಸರಾಂತ ಪ್ರತಿಹಾರ ದೊರೆ ರಾಜಬೋಜನ ಬಗ್ಗೆ ಹೇರಳ ಮಾಹಿತಿ ನೀಡುತ್ತದೆ.

 

9. ಇಂದು ವಿದೇಶಗಳಲ್ಲಿರುವ ಅಂದು ಭಾರತದ ಪ್ರಭಾವಕ್ಕೊಳಪಟ್ಟಿದ್ದ ಏಷ್ಯಾ ಮೈನರ್, ಮಧ್ಯ ಏಷ್ಯಾ, ಆಗ್ನೆಯ ಏಷ್ಯಾದಲ್ಲಿ ದೊರೆತಿರುವ ಅನೇಕ ಶಾಸನಗಳು ಭಾರತೀಯರ ರಾಜಕೀಯ ಸಾಂಸ್ಕೃತಿಕ ಸಂಪರ್ಕವನ್ನು ನೆನಪಿಗೆ ತರುತ್ತವೆ. ಏಷ್ಯಾ ಮೈನರ್‌ನಲ್ಲಿನ ಬೋಗಾಜ್-ಕಾಯ್ ಶಾಸನವು ಅನೇಕ ಆರ್ಯ ದೇವತೆಗಳ ಹೆಸರನ್ನು ಒಳಗೊಂಡಿದ್ದು ಆರ್ಯರು ಭಾರತದೆಡೆಗೆ ವಲಸೆ ಬಂದ ಬಗ್ಗೆ ಹಾಗೂ ಅವರ ಚಲನವಲನಗಳ ಬಗ್ಗೆ ಅಪರೂಪದ ಮಾಹಿತಿ ನೀಡುತ್ತದೆ. ಬೆಹಿಸ್ತಾನ್, ಪರ್ಸೆಪೊಲಿಸ್ ಮತ್ತು ನಕ್ಸ್-ಐ-ರುಸ್ತುಂಗಳಲ್ಲಿನ ಶಾಸನಗಳು ಭಾರತ ಮತ್ತು ಪರ್ಷಿಯಾ (ಇರಾನ್)ಗಳ ನಡುವಣ ರಾಜಕೀಯ ಸಂಬಂಧದದ ಬಗ್ಗೆ ತಿಳಿಸುತ್ತವೆ. ಆಗ್ನೆಯ ಏಷ್ಯಾದ ಅನೇಕ ಕಡೆಗಳಲ್ಲಿ ದೊರೆತಿರುವ ಶಾಸನಗಳು ಭಾರತೀಯ ಸಂಸ್ಕೃತಿಯ, ಧರ್ಮ, ಕಲೆ, ರಾಜಕೀಯ ಪ್ರಭಾವವನ್ನು ಎತ್ತಿ ಹಿಡಿಯುತ್ತವೆ.

 

ಮೇಲೆ ತಿಳಿಸಿದ ಕೆಲವು ಪ್ರಮುಖ ಶಾಸನಗಳ ಸಂಕ್ಷಿಪ್ತ ಪರಿಚಯವು ಇತಿಹಾಸದ ರಚನೆಗೆ ಶಾಸನಗಳು ಹೇಗೆ ಬಹು ಮುಖ್ಯ ಆಧಾರಗಳಾಗುತ್ತವೆ ಎಂಬುದನ್ನು ತಿಳಿಸುತ್ತವೆ. ಶಾಸನಗಳ ಐತಿಹಾಸಿಕ ಮಹತ್ವವನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.

1. ಶಾಸನಗಳಲ್ಲಿ ಕಂಡು ಬರುವ ವಿವಿಧ ರಾಜರ ಹೆಸರುಗಳು ಹಾಗೂ ಅವರ ಕಾಲಮಾನಗಳ ಸೂಚಿಯಿಂದಾಗಿ ಮೌರ್ಯ, ಗುಪ್ತ ಮುಂತಾದ ರಾಜವಂಶಗಳ ವಂಶಾವಳಿ ಹಾಗೂ ಕಾಲಾನುಕ್ರಮಣಿಕೆಯನ್ನು ರಚಿಸಲು ಸಾಧ್ಯವಾಗಿದೆ.

2. ಶಾಸನಗಳಲ್ಲಿ ಸಾಮಾನ್ಯವಾಗಿ ಕಾಲಗಣನೆಯನ್ನು ಶಾಲಿವಾಹನ, ವಿಕ್ರಮ ಶಕ ಅಥವಾ ಕಲಿಯುಗದ ವರ್ಷಗಳಲ್ಲಿ ಸಿಂಹಾಸನಾರೋಹಣ, ಯುದ್ಧ ಮುಂತಾದವುಗಳನ್ನು ನಮೂದಿಸಿರುವುದರಿಂದ ಕಾಲಗಣನಾ ಶಾಸ್ತ್ರಕ್ಕೆ ಶಾಸನಗಳು ಬಹು ಅಮೂಲ್ಯ ಆಧಾರಗಳಾಗುತ್ತವೆ.

3. ಬಹು ಪಾಲು ಶಾಸನಗಳು ಸಮಕಾಲೀನವಾಗಿದ್ದು ನಿರ್ದಿಷ್ಟವಾದ ವಿವರಗಳನ್ನು ನೀಡುವುದರಿಂದ ಇವು ನಂಬಲು ಅರ್ಹವಾದ ಆಧಾರಗಳಾಗಿವೆ.

4. ಶಾಸನಗಳು ರಾಜರ ಯುದ್ಧ, ಸಾಧನೆ, ಗಮನಾರ್ಹ ಘಟನೆಗಳ ಬಗ್ಗೆ ತಿಳಿಸುವುದರಿಂದ ಅನೇಕ ರಾಜರ ಕಾರ್ಯ ಸಾಧನೆಗಳು ಗೋಚರಿಸಿವೆ. ಇಲ್ಲದಿದ್ದರೆ ಆ ಕಾಲಾವಧಿಯು ಕಗ್ಗತ್ತಲೆಯಲ್ಲಿ ಮುಳುಗಿ ಹೋಗುತ್ತಿತ್ತು. ಸಮುದ್ರಗುಪ್ತನ ಅಲಹಾಬಾದ್ ಶಾಸನ ದೊರೆಯದಿದ್ದರೆ ಅವನ ಉತ್ತರ ಮತ್ತು ದಕ್ಷಿಣ ಭಾರತದ ದಿಗ್ವಿಜಯಗಳ ಬಗ್ಗೆ ತಿಳಿಯುತ್ತಲೇ ಇರಲಿಲ್ಲ.

5. ಶಾಸನಗಳು ಕಾಲಗಣನೆ, ರಾಜರ ಯುದ್ಧಗಳನ್ನು ಮಾತ್ರ ತಿಳಿಸದೆ ಅವರ ವ್ಯಕ್ತಿತ್ವ, ಜೀವನದ ಬಗ್ಗೆಯೂ ಮಾಹಿತಿ ತಿಳಿಸುತ್ತವೆ. ಅವರ ಧರ್ಮ, ಪ್ರಜೆಗಳ ಬಗೆಗಿನ ಕಾಳಜಿ ಅವರ ಶಿಕ್ಷಣ ಮುಂತಾದವುಗಳ ಬಗ್ಗೆಯೂ ತಿಳಿಸುತ್ತವೆ.

6. ಶಾಸನಗಳು ಸಾಮ್ರಾಜ್ಯದ ಗಡಿಗಳನ್ನು ತಿಳಿಸುವುದರೊಂದಿಗೆ ಸಾಮ್ರಾಜ್ಯದ ವ್ಯಾಪ್ತಿಯನ್ನು ತಿಳಿಸುತ್ತವೆ. ಅಶೋಕನ ಶಾಸನಗಳಿಂದಾಗಿ ಮೌರ್ಯ ಸಾಮ್ರಾಜ್ಯವು ವಾಯುವ್ಯ ಗಡಿಪ್ರಾಂತ್ಯ, ಕಾಥೇವಾಡ, ಬಿಹಾರ, ಒರಿಸ್ಸಾ, ಮೈಸೂರು ಹೀಗೆ ಮುಂದುವರಿದು ನೇಪಾಳದ ತರೈವರೆಗೂ ಹಬ್ಬಿದ್ದಿತು ಎಂಬುದಾಗಿ ತಿಳಿದುಬರುತ್ತದೆ.

7. ಶಾಸನಗಳ ಮಾಹಿತಿಯಿಂದಾಗಿ ಸ್ಥಳ ಮತ್ತು ಘಟನೆಯ ಸಂಬಂಧವನ್ನು ನಿಖರವಾಗಿ ತಿಳಿಯಬಹುದು. ಉದಾಹರಣೆಗೆ ಅಶೋಕನ ರುಮಿಂಡೈ ಶಾಸನವು ಭಗವಾನ್ ಬುದ್ಧನು ಲುಂಬಿಣಿಯಲ್ಲಿ ಜನಿಸಿದನೆಂದು ತಿಳಿಸುತ್ತದೆ. ಈ ಶಾಸನದ ಮಾಹಿತಿಯಿಲ್ಲದಿದ್ದರೆ ಬುದ್ಧನ ಜನನ ಸ್ಥಳದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತಿದ್ದವು.

8. ಶಾಸನಗಳ ಮಾಹಿತಿಯ ಸಹಾಯದಿಂದಾಗಿ ಭಾರತದ ವಿವಿಧ ಭಾಗಗಳಲ್ಲಿದ್ದ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಯನ್ನು ಬದಲಾವಣೆಗಳನ್ನು ಅರಿಯಬಹುದಾಗಿದೆ. ಹಾಗೆಯೇ ಭಾರತದ ವಿವಿಧ ಸಾಮ್ರಾಜ್ಯಗಳ ಮನೆತನಗಳ ಆಳ್ವಿಕೆಯಲ್ಲಿ ಇದ್ದಂತಹ ವಿಭಿನ್ನವಾದ ಆಡಳಿತ ವ್ಯವಸ್ಥೆಯನ್ನು ತಿಳಿಯಬಹುದು.

9. ಭಾರತದ ಇತಿಹಾಸದ ರಚನೆಯಲ್ಲಿ ಶಿಲಾಶಾಸನಗಳು ಬಹು ನಂಬಿಕಾರ್ಹ ಆಧಾರಗಳು, ಏಕೆಂದರೆ ಇವುಗಳು ಬಹುಬೇಗ ನಾಶವಾಗದೆ ಉಳಿದಿರಬಲ್ಲವು. ಶಾಸನಗಳಲ್ಲಿನ ಮಾಹಿತಿಯನ್ನು ಸಾಹಿತ್ಯ ಕೃತಿಯಲ್ಲಿಯಂತೆ ಬದಲಾಯಿಸಲು ಸುಲಭ ಸಾಧ್ಯವಲ್ಲ. ಆದ್ದರಿಂದಲೇ ವಿ.ಎ. ಸ್ಮಿತ್‌ರವರು ಶಾಸನಗಳನ್ನು ನಂಬಿಕಾರ್ಹ ಮಾಹಿತಿಗಳ ಆಧಾರಗಳು ಎಂದಿದ್ದಾರೆ.

10. ಭಾರತದಲ್ಲಿ ಆ ಕಾಲದಲ್ಲಿದ್ದ ಬಹು ಭಾಷೆಗಳಿಂದಾಗಿ ಶಾಸನಗಳಲ್ಲಿನ ಮಾಹಿತಿಯು ಸಂಸ್ಕೃತ, ಪ್ರಾಕೃತ, ತೆಲುಗು, ಕನ್ನಡ, ತಮಿಳು ಮುಂತಾದ ಭಾಷೆಗಳಲ್ಲಿವೆ. ಹಾಗಾಗಿ ಆ ಭಾಷೆ ಲಿಪಿಗಳ ಉಗಮ, ಬೆಳವಣೆಗೆಯ ಬಗ್ಗೆ ಮಾಹಿತಿ ದೊರೆಯುತ್ತದೆ. ಶಾಸನಗಳಲ್ಲಿನ ಭಾಷೆಯ ಆಧಾರದ ಮೇಲೆ ಗುಪ್ತರ ಪೂರ್ವಯುಗವು ಪ್ರಾಕೃತವೆಂದು. ಗುಪ್ತಾನಂತರದ ಕಾಲವು ಸಂಸ್ಕೃತದ ಬೆಳವಣೆಯ ಕಾಲವೆಂಬುದಾಗಿ ನಾವು ತಿಳಿಯಬಹುದು.

11. ಶಾಸನಗಳಲ್ಲಿ ಬಳಸಿರುವ ಶಿಲೆ, ಲೋಹಗಳ ಮೇಲಿನ ಕೆತ್ತನೆ. ನೀಡಿರುವ ಹೊಳಪು ಆ ಕಾಲದ ಜನರ ಕಲಾನೈಮಣ್ಯತೆಯನ್ನು, ವೈಜ್ಞಾನಿಕ ಬೆಳವಣಿಗೆಯ ಉತ್ತುಂಗತೆಯನ್ನು ತಿಳಿಸುತ್ತವೆ. ಉದಾಹರಣೆಗೆ ಗುಪ್ತರ ಕಾಲದ ಮಹೌಲಿ ಕಬ್ಬಿಣದ ಸ್ತಂಭ ಶಾಸನವು ಶತಶತಮಾನಗಳಿಂದ ಗಾಳಿ, ಮಳೆ, ದೂಳು, ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಂತಿದ್ದರೂ ಆ ಲೋಹದ ಮೇಲೆ ಹಾಗೂ ಅದರ ಕೆತ್ತನೆಗಳ ಮೇಲೆ ಯಾವುದೇ ದುಷ್ಪರಿಣಾಮವನ್ನು ಉಂಟುಮಾಡಲು ಸಾಧ್ಯವಾಗದಿದ್ದುದು ಆಗಿನ ಕಾಲದ ಜನರ ಲೋಹ ವಿಜ್ಞಾನದ ಪಾರಮ್ಯತೆಯನ್ನು ಎತ್ತಿ ಹಿಡಿಯುತ್ತದೆ.

12.ಸಮಕಾಲೀನ ಸಾಹಿತ್ಯದ ಮಹಾ ಕೊರತೆಗಳೆಂದರೆ ಅಸಂಬದ್ಧವಾದ ಹಾಗೂ ಉತ್ತೇಕ್ಷೆಯಿಂದ ಕೂಡಿದ ಹೇಳಿಕೆಗಳು ಹಾಗೂ ವಂಶಾವಳಿಗಳ ಕೊರತೆಗಳಾಗಿವೆ. ಆದರೆ ಶಾಸನಗಳು ಇಂತಹ ದೋಷಗಳಿಂದ ಮುಕ್ತವಾಗಿರುತ್ತವೆಂಬುದೇ ಇವುಗಳ ಐತಿಹಾಸಿಕ ಮಹತ್ವದ ಮೇಲೆ ಎಂದು ಹೇಳಬಹುದು.

ಮೇಲ್ಕಂಡ ಐತಿಹಾಸಿಕ ಮಹತ್ವಗಳನ್ನು ಶಾಸನಗಳು ಹೊಂದಿದ್ದರೂ ಅವುಗಳು ಸಹ ಅನೇಕ ಕುಂದುಕೊರತೆಗಳಿಂದ ತುಂಬಿವೆ. ಶಾಸನಗಳು ಹೊಂದಿರುವ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಇತಿಹಾಸವನ್ನು ರಚಿಸಲು ಸಾಧ್ಯವಿಲ್ಲ. ಹಾಗೂ ಶಾಸನಗಳಲ್ಲಿರುವುದೆಲ್ಲ ಐತಿಹಾಸಿಕವಾಗಿ ಸತ್ಯವಾದುದೆಂದು ನಂಬುವ ಹಾಗೂ ಇಲ್ಲ. ಒಂದೇ ಸಂತತಿಯ ಮೊದಲಿದ್ದ ರಾಜರುಗಳ ಬಿರುದು ಬಾವಲಿಗಳನ್ನು ಮತ್ತು ಸಾಧನೆಗಳನ್ನು ಉತ್ತರಾಧಿಕಾರಿಗಳಾದವರೂ ತಮ್ಮ ಶಾಸನಗಳಲ್ಲಿ ಹೇಳಿಕೊಳ್ಳುತ್ತಾರೆ. ಕೆಲವೊಮ್ಮೆ ಒಬ್ಬ ರಾಜಕುಮಾರನು ಉತ್ತರಾಧಿಕಾರಿಯಾಗಬಹುದಾದ ಯುವರಾಜನಾಗಿದ್ದರೆ ಅವನು ಯುವರಾಜನಾಗಿದ್ದ ಅವಧಿಯನ್ನು ಅವನ ಆಡಳಿತದ ಅವಧಿಯೆಂದು ಕೆಲವು ಶಾಸನಗಳು ತಿಳಿಸುತ್ತವೆ. ಇದರಿಂದಾಗಿ ರಾಜವಂಶಗಳ ಕಾಲಾನುಕ್ರಮಣಿಕೆಯಲ್ಲಿ ಏರುಪೇರು ಉಂಟಾಗುತ್ತದೆ.

ಪರಸ್ಪರ ವಿರೋಧಿಗಳಾದ ದೊರೆಗಳ ನಡುವೆ ನಡೆದ ಯುದ್ಧದಲ್ಲಿ ತಾವೇ ಗೆದ್ದೆವೆಂದು ಇಬ್ಬರು ರಾಜರು ತಮ್ಮ ಶಾಸನಗಳಲ್ಲಿ ಹೇಳಿಕೊಳ್ಳುತ್ತಾರೆ. ಉದಾಹರಣೆಗೆ ನರ್ಮದಾ ನದಿ ತೀರದಲ್ಲಿ ನಡೆದ ಹರ್ಷವರ್ಧನ ಹಾಗೂ ಇಮ್ಮಡಿ ಪುಲಿಕೇಶಿಯರ ನಡುವಣ ಯುದ್ಧದಲ್ಲಿ ಹರ್ಷವರ್ಧನನು ಸೋತರೂ ಅದನ್ನು ತನ್ನ ಶಾಸನಗಳಲ್ಲಿ ಒಪ್ಪಿಕೊಳ್ಳುವುದಿಲ್ಲ. ಆದರೆ ಇಮ್ಮಡಿ ಪುಲಿಕೇಶಿಯ ಐಹೊಳೆ ಶಾಸನವು ಹರ್ಷನ ವಿರುದ್ಧ ಜಯ ಸಾಧಿಸಿದ ಬಗ್ಗೆ ನಿರೂಪಿಸುತ್ತದೆ. ಇಂತಹ ಸಂದರ್ಭದಲ್ಲಿ ಶಾಸನಗಳ ಐತಿಹಾಸಿಕ ಸತ್ಯದ ಬಗ್ಗೆ ವಿದ್ವಾಂಸರಲ್ಲಿ ಜಿಜ್ಞಾಸೆ ಹುಟ್ಟುತ್ತದೆ. ಇದೇ ಯುದ್ಧದ ಬಗ್ಗೆ ಹೂಯನ್‌ ತ್ಸಾಂಗನು ತನ್ನ ಸಿ-ಯು-ಕಿ ಗ್ರಂಥದಲ್ಲಿ ಹರ್ಷನ ವಿರುದ್ಧ, ಪುಲಿಕೇಶಿಯು ಜಯಹೊಂದಿದ ಬಗ್ಗೆ ತಿಳಿಸುವುದರಿಂದ ಈ ಜಿಜ್ಞಾಸೆ ಬಗೆಹರಿದಿದೆ. ಹಾಗೆಯೇ ಶಾಸನಗಳ ಕರ್ತೃಗಳು ರಾಜನನ್ನು ಮೆಚ್ಚಿಸಲು ಹಾಗೂ ರಾಜನ ಮೇಲಿನ ಅಭಿಮಾನದಿಂದಾಗಿ ತಮ್ಮ ರಾಜನ ಸೋಲನ್ನೇ ಜಯವೆಂದು ಕರೆಯುತ್ತಾರೆ. ಕೆಲವು ಶಾಸನಗಳು ಐತಿಹಾಸಿಕ ಅಂಶಗಳ ಜೊತೆಗೆ ಅನೇಕ ಐತಿಹ್ಯಗಳು ಮತ್ತು ಉತ್ತೇಕ್ಷಿತ ಅಂಶಗಳನ್ನು ಒಳಗೊಂಡಿರುವುದರಿಂದ ಶಾಸನಗಳಲ್ಲಿ ಐತಿಹಾಸಿಕ ಅಂಶಗಳನ್ನು ಆಯ್ದುಕೊಳ್ಳುವುದು ಇತಿಹಾಸಕಾರನಿಗೆ ಕಷ್ಟತಮ ಕಾರ್ಯವಾಗಿದೆ. ಅನೇಕ ಶಾಸನಗಳನ್ನು ಅವುಗಳ ಮೂಲ ಸ್ಥಾನದಿಂದ ವರ್ಗಾಯಿಸಲಾಗಿದೆ. ಉದಾಹರಣೆಗೆ ತೊಪ್ರಾ ಮತ್ತು ಮೀರತ್ ಶಾಸನಗಳನ್ನು ಫಿರೋಜ್ ಷಾ ತುಘಲಕನು ದೆಹಲಿಗೆ ವರ್ಗಾಯಿಸಿದ. ಅಕ್ಟರನು ಕೌಸಾಂಬಿ ಶಾಸನವನ್ನು, ಹೀಗೆ ಅವುಗಳ ಮೂಲ ಸ್ಥಾನದಿಂದ ವರ್ಗಾಯಿಸುವುದರಿಂದಾಗಿ ಇತಿಹಾಸದ ಅಧ್ಯಯನಕ್ಕೆ ತೊಡಕಾಗುತ್ತದೆ. ಶಾಸನಗಳು ಮೂಲಸ್ಥಾನದಲ್ಲೇ ಇದ್ದರೆ ಇನ್ನೂ ಅನೇಕ ಮಹತ್ವದ ಅಂಶಗಳ ದೊರೆಯುವಿಕೆಗೆ ಕಾರಣವಾಗಬಹುದು.

ಹೀಗೆ ಶಾಸನಗಳಲ್ಲಿ ಅನೇಕ ಲೋಪದೋಷಗಳಿದ್ದರೂ ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳೇ ಅತಿ ಪ್ರಮುಖ ಐತಿಹಾಸಿಕ ಆಧಾರಗಳಾಗಿವೆ.

 

3. ನಾಣ್ಯಗಳು 


ನಾಣ್ಯಗಳ ಅಧ್ಯಯನವನ್ನು ನಾಣ್ಯಶಾಸ್ತ್ರ (Numismatic)ವೆಂದು ಕರೆಯುತ್ತಾರೆ. ನಮ್ಮ ದೇಶದ ವಿವಿಧ ಭಾಗಗಳಲ್ಲಿ ದೊರೆತಿರುವ ಚಿನ್ನ, ಬೆಳ್ಳಿ, ತಾಮ್ರ, ಸೀಸ, ಪೋಟನ್ ಮುಂತಾದ ಲೋಹಗಳ ನಾಣ್ಯಗಳು ಭಾರತದ ಇತಿಹಾಸ ರಚನೆಗೆ ಅತ್ಯಮೂಲ್ಯವಾದ ಆಧಾರಗಳಾಗಿವೆ. ಇತರೆ ಆಧಾರಗಳಿಂದ ತಿಳಿಯದೆ ಇರುವಂತಹ ವಿಷಯಗಳನ್ನು ನಾಣ್ಯಗಳು ತಿಳಿಸಿಕೊಡುತ್ತವೆ. ನಾಣ್ಯಗಳ ಮೇಲಿನ ಚಿಹ್ನೆಗಳು, ಚಿತ್ರಗಳು, ರಾಜವಂಶದ ಹೆಸರು, ಬಿರುದುಗಳು ಮುಂತಾದ ಲೇಖನಗಳು ಮತ್ತು ಅವುಗಳನ್ನು ತಯಾರಿಸಲು ಉಪಯೋಗಿಸಿದ ಲೋಹ ಅವುಗಳ ನಿರ್ದಿಷ್ಟ ಆಕಾರ. ಗಾತ್ರ, ತೂಕ ಮುಂತಾದವುಗಳ ಶಾಸ್ತ್ರೀಯ ಅಧ್ಯಯನದಿಂದ ಅಮೂಲ್ಯ ಮಾಹಿತಿಗಳು ದೊರೆಯುತ್ತವೆ. ಭಾರತೀಯ ನಾಣ್ಯಶಾಸ್ತ್ರದ ಮೇಲೆ ವಿದೇಶಿ ಪ್ರಭಾವ ಅಧಿಕವಾಗಿದೆ. ಇದೇ ಆಧಾರದ ಮೇಲೆ ಅನೇಕ ವಿದ್ವಾಂಸರು ಭಾರತೀಯರಿಗೆ ನಾಣ್ಯ ಬಳಕೆಯ ಜ್ಞಾನವೇ ಗೊತ್ತಿರಲಿಲ್ಲವೆಂದೂ, ಅವರು ಗ್ರೀಕರಿಂದ ಈ ಜ್ಞಾನವನ್ನು ಪಡೆದರೆಂದು ವಾದಿಸುತ್ತಾರೆ. ಆದರೆ ಕ್ರಿ. ಪೂ. ಸುಮಾರು 7ನೆಯ ಶತಮಾನದಲ್ಲೇ ಭಾರತದಲ್ಲಿ ನಾಣ್ಯಗಳು ಪ್ರಚಲಿತವಾಗಿದ್ದವು. ಈ ನಾಣ್ಯಗಳನ್ನು ಶತಮಾನ, ನಿಷ್ಠೆ, ಪುರಾಣ, ಕಾರ್ಷಾಪಣ, ಚಿಹ್ನೆ ಮಾಡಿದ ನಾಣ್ಯಗಳು (Punch-marked coin) ಮುಂತಾದ ಹೆಸರುಗಳಿಂದ ಗುರುತಿಸುತ್ತಿದ್ದರು. ಕ್ರಿ.ಪೂ. 6ನೇ ಶತಮಾನದಿಂದ ಚಿಹ್ನೆ ಮಾಡಿದ ನಾಣ್ಯಗಳು ನಿರ್ದಿಷ್ಟವಾಗಿ ದೊರೆಯುತ್ತವೆ. ಆದರೆ ವಿನ್ಸೆಂಟ್ ಸ್ಮಿತ್, ಲ್ಯಾಪ್ಸನ್ ಮುಂತಾದ ವಿದ್ವಾಂಸರು ಈ ನಾಣ್ಯಗಳು ಕೇವಲ ಖಾಸಗಿ ನಾಣ್ಯಗಳೇ ಹೊರತು ರಾಜ್ಯದಿಂದ ಹೊರಡಿಸಲ್ಪಟ್ಟ ನಾಣ್ಯಗಳಲ್ಲ ಎಂದು ವಾದಿಸುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಗಳು ಚಿಹ್ನೆ ಮಾಡಿದ ನಾಣ್ಯಗಳು ಸಾರ್ವತ್ರಿಕ ನಾಣ್ಯಗಳೆಂದು ಆಧಾರ ಸಮೇತವಾಗಿ ನಿರೂಪಿಸಿವೆ. ಕುಶಾನ ವಂಶದ ರಾಜರುಗಳು ಚಿನ್ನದ ನಾಣ್ಯಗಳನ್ನು ಭಾರತದಲ್ಲಿ ಮೊದಲು ಪ್ರಚುರಗೊಳಿಸಿದರು. ಗ್ರೀಕ್ ದೇಶದಲ್ಲಿ ಚಲಾವಣೆಯಲ್ಲಿದ್ದ ಸ್ತೇತ‌ರ್ (Stater), ಡೇರಿಕ್ (Daric) ಮತ್ತು ದಿನಾರ್ (Dinarius) ಮುಂತಾದ ನಾಣ್ಯಗಳು ನಮ್ಮ ದೇಶದಲ್ಲೂ ದೊರೆತಿವೆ. ಭಾರತದ ಮೇಲೆ ಗ್ರೀಕರ ಧಾಳಿಯ ನಂತರ ಭಾರತದ ನಾಣ್ಯಗಳ ಗುಣಮಟ್ಟ ಉತ್ತಮಗೊಂಡಿತು. ನಾಣ್ಯಗಳ ಮೇಲೆ ರಾಜರ ಬಿರುದು ಹಾಗೂ ಹೆಸರುಗಳನ್ನು ಅಚ್ಚು ಹಾಕಲಾರಂಬಿಸಿದರು. ಶಕ ದೊರೆಗಳು ತಮ್ಮ ನಾಣ್ಯಗಳ ಮೇಲೆ ಬಿರುದು ಹಾಗೂ ಹೆಸರುಗಳ ಜೊತೆಗೆ ಶಕ ವರ್ಷದಿಂದ ಆರಂಭವಾಗುವ ದಿನಾಂಕ ಹಾಗೂ ವರ್ಷವನ್ನು ಅಳವಡಿಸಿದ್ದು ಇತಿಹಾಸದ ಕಾಲಾನುಕ್ರಮಣಿಕೆಗೆ ಅತ್ಯುಪಯುಕ್ತವಾಗಿದೆ.

 

ನಾಣ್ಯಗಳ ಐತಿಹಾಸಿಕ ಮಹತ್ವ :

 

ಭಾರತದ ಅನೇಕ ವಂಶಗಳ ಇತಿಹಾಸ ನಾಣ್ಯಶಾಸ್ತ್ರದಿಂದ ಪುನರಚಿತವಾಗಿದೆ. ಹಾಗೆಯೇ ಆಡಳಿತಾತ್ಮಕ, ಧಾರ್ಮಿಕ, ರಾಜಕೀಯ ಸುವ್ಯವಸ್ಥೆ, ವಾಣಿಜ್ಯ ವ್ಯಾಪಾರ ವ್ಯವಹಾರಗಳಿಂದ ತಿಳಿದುಬರುವ ಆರ್ಥಿಕ ಪರಿಸ್ಥಿತಿ, ಸಾಂಸ್ಕೃತಿಕ ಇತಿಹಾಸ ಇವುಗಳನ್ನು ತಿಳಿದುಕೊಳ್ಳಲು ನಾಣ್ಯಶಾಸ್ತ್ರವು ಅಮೋಘವಾದ ಮಾಹಿತಿಯನ್ನು ನೀಡಿದೆ. ಆದರೆ ನಾಣ್ಯಶಾಸ್ತ್ರವು ನೀಡುವ ಮಾಹಿತಿಯು ಪೂರಕವಾಗಿ ಹಾಗೂ ಸಹಾಯಕಾರಿ ಆಧಾರವಾಗುತ್ತದೆಯೇ ಹೊರತು ಏಕೈಕ ಮೂಲಾಧಾರವಾಗುವುದಿಲ್ಲ. ಇದು ಇತಿಹಾಸದ ಚೌಕಟ್ಟನ್ನು ಕಟ್ಟಲು ಬೇಕಾದ ಪ್ರಧಾನವಾದ ಅಂಶಗಳನ್ನು ಒದಗಿಸುತ್ತದೆ. ಭಾರತದ ವಾಯುವ್ಯ ಭಾಗದಲ್ಲಿ ಕ್ರಿ.ಪೂ. 2-1 ನೆಯ ಶತಮಾನಗಳಲ್ಲಿ ಆಳಿದ ಸುಮಾರು ಮೂವತ್ತು ಜನ ಗ್ರೀಕ್ ಅರಸರ ಬಗ್ಗೆ ನಮಗೆ ತಿಳಿದು ಬಂದಿರುವುದೆಲ್ಲ ಅವರು ಚಲಾವಣೆಗೆ ತಂದ ನಾಣ್ಯಗಳಿಂದ ಮಾತ್ರವೇ. ಕುಶಾನರ ನಾಣ್ಯಗಳಲ್ಲಿ ಆ ವಂಶದ ರಾಜರು ರೋಂ ದೇಶದ ಟೋಪಿ ಮತ್ತು ಕುಳಿತ ಭಂಗಿಯು ರೋಂ ಶೈಲಿಯದಾಗಿರುವುದರಿಂದ ಕುಶಾನರ ಮೇಲೆ ರೋಮನ್ನರ ಪ್ರಭಾವ ಹೆಚ್ಚಾಗಿತ್ತು ಎಂದು ತಿಳಿದುಬರುತ್ತದೆ. ಆಗಸ್ಟಸ್ ಮತ್ತು ಟೈಬೀರಿಯಸ್ ಚಕ್ರವರ್ತಿಗಳ ಕಾಲದ 200 ರೋಮನ್ ನಾಣ್ಯಗಳು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ದೊರಕಿವೆ. ಹಾಗೆಯೇ ಕರ್ನಾಟಕದ ಚಂದ್ರವಳ್ಳಿ, ತಲಕಾಡು ಸಂಶೋಧನೆಯಲ್ಲಿ, ತಮಿಳುನಾಡಿನ ಅರಿಕಮೇಡು ಮುಂತಾದ ಕಡೆ ದೊರೆತಿರುವ ರೋಮನ್ ನಾಣ್ಯಗಳು ಭಾರತ ಮತ್ತು ರೋಮ್ ದೇಶಗಳ ನಡುವಣದ ವ್ಯಾಪಾರ ಸಂಬಂಧವನ್ನು ತಿಳಿಸುತ್ತವೆ.

ಇಂಡೋ-ಗ್ರೀಕ್, ಶಕ ಮತ್ತು ಇಂಡೋ-ಪರ್ಷಿಯನ್ ವಂಶದ ರಾಜರ ಇತಿಹಾಸವನ್ನು ಆರಿತುಕೊಳ್ಳಲು ಅವರ ನಾಣ್ಯಗಳು ಏಕಮಾತ್ರ ಆಧಾರಗಳಾಗಿವೆ. ಇದೇ ಅವಧಿಗೆ ಸಂಬಂಧಿಸಿದ ಕೆಲವು ನಾಣ್ಯಗಳ ಮೇಲೆ ಗ್ರೀಕ್ ಮತ್ತು ಭಾರತದ ಖರೋಷ್ಠಿ ಹಾಗೂ ಬ್ರಾಹಿ ಲಿಪಿಗಳ ಬರಹಗಳು ಕಂಡುಬರುತ್ತವೆ. ಇಂತಹ ಈ ನಾಣ್ಯಗಳು ಭಾರತದ ಅನೇಕ ಶಿಲಾಶಾಸನಗಳನ್ನು ಓದುವುದಕ್ಕೆ ಬೀಗದ ಕೈಯಂತೆ ಸಹಕಾರಿಯಾಗುತ್ತವೆ. ಬ್ರಾ ಹಾಗೂ ಖರೋಷ್ಠಿ ಲಿಪಿಗಳನ್ನು ಓದಲು ಸಾಧ್ಯವಾದುದು ಇಂತಹ ಗ್ರೀಕ್ ಬರವಣಿಗೆಗಳ ಜೊತೆಗಿದ್ದ ಈ ಲಿಪಿಗಳ ತುಲನೆಯಿಂದಾಗಿಯೇ. ಪ್ರೊ. ರಾಪ್ಸನ್‌ರವರು "ಹಳೆಯ ಲಿಪಿಗಳನ್ನೊಳಗೊಂಡ ಶಾಸನಗಳನ್ನು ಓದಲು ಹಾಗೂ ಅರ್ಥೈಸಲು ನಾಣ್ಯಗಳು ಸಹಾಯಕವಾಗುತ್ತವೆ" ಎಂದಿರುವುದು ಅವುಗಳ ಐತಿಹಾಸಿಕ ಮಹತ್ವವನ್ನು ತಿಳಿಸುತ್ತದೆ.

"ಯೌದೇಯಗಣಸೃಜಯ!" (ಯೌದೇಯ ಗಣಕ್ಕೆ ಸೇರಿದವನಾದ ಜಯ) ಎಂಬ ನಾಮಾಂಕಿತ ಹೊಂದಿದ ಯೌದೇಯ ಗಣರಾಜ್ಯದ ನಾಣ್ಯಗಳು ಕ್ರಿ.ಪೂ. ಎರಡನೇ ಶತಮಾನದಿಂದ ಹಿಡಿದು ನಾಲ್ಕನೆಯ ಶತಮಾನದವರೆಗೆ ದೊರಕಿವೆ. ನೆಲದಲ್ಲಿ ಹೂತುಹೋಗಿದ್ದ ಈ ನಾಣ್ಯಗಳು ದೊರೆಯದಿದ್ದರೆ ಪ್ರಾಚೀನ ಭಾರತದ ಇತಿಹಾಸದಲ್ಲಿ ಯಮುನಾ ಮತ್ತು ಸೆಟೆಡ್ ಹಾಗೂ ಚಂಬಲ್ ಮತ್ತು ಹಿಮಾಲಯಗಳ ನಡುವೆ ನೆಲೆಗೊಂಡಿದ್ದ "ಯೌದೇಯ" ಎಂಬ ಪ್ರಬಲ ಗಣರಾಜ್ಯದ ವಿಷಯವೇ ತಿಳಿಯುತ್ತಿರಲಿಲ್ಲ. ಈ ನಾಣ್ಯಗಳು ದೊರೆತ ನಂತರ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಹಾಗೂ ಭಾರತೀಯ ಇತಿಹಾಸದ ತಲಸ್ಪರ್ಶಿ ಸಂಶೋಧಕರೂ ಆದ ಡಾಕಿ ಅಲ್ಲೇಕರ್ ಅವರಂಥ ವಿದ್ವಾಂಸರು ವಿದೇಶಿಯರಾದ ಕುಶಾನರ ಆಳ್ವಿಕೆಯನ್ನು ಭಾರತದಿಂದ ತೊಡೆದುಹಾಕಿದ ಶ್ರೇಯಸ್ಸು ಸಲ್ಲಬೇಕಾಗಿರುವುದು ಯೌದೇಯರಿಗೆ ಹೊರತು ಗುಪ್ತ ವಂಶದರಿಗಾಗಲೀ ಅಥವಾ ಭಾರಶಿವ ವಂಶದವರಿಗಾಗಲೀ ಅಲ್ಲವೆಂದು ವಾದಿಸಿದ್ದಾರೆ.

ಗುಪ್ತರು ತಮ್ಮ ಅಪಾರ ಸಾಧನ ಸಂಪತ್ತಿನ ಸಹಾಯದಿಂದ ವಿವಿಧ ಸುಂದರ ಚಿನ್ನದ ನಾಣ್ಯಗಳನ್ನು ಬಹು ವ್ಯಾಪಕವಾಗಿ ಪ್ರಸಾರಗೊಳಿಸಿದರು. ಗುಪ್ತರ ಮೊದಲನೇ ಚಂದ್ರಗುಪ್ತನು ಲಿಚ್ಛವಿ ವಂಶದ ಕುಮಾರದೇವಿಯನ್ನು ವಿವಾಹವಾದುದನ್ನು ಅವನ ಶಾಸನಗಳ ಮೇಲಿನ ಬರಹಗಳು ಸ್ಪಷ್ಟಗೊಳಿಸುತ್ತವೆ. ಸಮುದ್ರಗುಪ್ತನೊಬ್ಬನೇ ಎಂಟು ಬಗೆಯ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಹೊರಡಿಸಿದ್ದಾನೆ. ರಾಜರ ಅಭಿರುಚಿ, ಅವರು ಅನುಸರಿಸುತ್ತಿದ್ದ ಧರ್ಮ, ಅವರು ಪೂಜಿಸುತ್ತಿದ್ದ ದೇವತೆಗಳು ಮುಂತಾದವನ್ನು ನಾಣ್ಯಗಳು ತಿಳಿಸುತ್ತವೆ. ಉದಾಹರಣೆಗೆ ಸಮುದ್ರಗುಪ್ತನು ತನ್ನ ಒಂದು ನಾಣ್ಯದ ಮೇಲೆ ವೀಣೆ ನುಡಿಸುತ್ತಿರುವ ಭಂಗಿಯಲ್ಲಿ ಕುಳಿತ ಚಿತ್ರವಿದೆ. ಈ ಚಿತ್ರವು ಅವನ ಸಂಗೀತ ಮೋಹದ ಬಗ್ಗೆ ತಿಳಿಸುತ್ತದೆ. ಮತ್ತೊಂದು ನಾಣ್ಯದಲ್ಲಿ ಸಮುದ್ರಗುಪ್ತನು ಯುದ್ಧ ಕೊಡಲಿಯನ್ನು ಹಿಡಿದುಕೊಂಡ ಚಿತ್ರವಿದ್ದು ಯುದ್ಧದ ಕೊಡಲಿಯು ಯಮನ ಆಯುಧವಾದ್ದರಿಂದ ಆ ಆಧಾರದ ಮೇಲೆ ಅವನು ಯಮನ ಆರಾಧಕನಾಗಿರಬಹುದೆಂದು ಭಾವಿಸಬಹುದಾಗಿದೆ. ಅನೇಕ ನಾಣ್ಯಗಳ ಮೇಲೆ "ಅಶ್ವಮೇಧ-ರಾಜನ್" ಎಂದು ಇರುವುದರಿಂದ ಸಮುದ್ರಗುಪ್ತನು ಅಶ್ವಮೇಧಯಾಗ ಮಾಡಿದನೆಂದು ತಿಳಿದುಬರುತ್ತದೆ. ಗುಪ್ತರ ನಾಣ್ಯಗಳ ಮೇಲೆ ಲಕ್ಷ್ಮಿಯ ಚಿತ್ರವೂ, ಕುಶಾನರ ನಾಣ್ಯಗಳ ಮೇಲೆ ಶಿವನ ಚಿತ್ರವೂ ಅತಿ ಹೆಚ್ಚು ಇರುವುದರಿಂದ ಆ ದೇವತೆಗಳ ಅನುಯಾಯಿ ಅವರಾಗಿದ್ದರೆಂದು ತಿಳಿಯಬಹುದು.

ಎರಡನೇ ಚಂದ್ರಗುಪ್ತನ ಬೆಳ್ಳಿಯ ನಾಣ್ಯಗಳು ಅವನು ಪಶ್ಚಿಮದ ಶಕರನ್ನು ಸೋಲಿಸಿದ್ದನ್ನು ಹಾಗೂ ಶಕರ ಬೆಳ್ಳಿಯ ನಾಣ್ಯಗಳ ರೀತಿಯಲ್ಲೇ ನಾಣ್ಯಗಳನ್ನು ಅಚ್ಚು ಹಾಕಿಸಿದ್ದನ್ನು ಸೂಚಿಸುತ್ತದೆ. ನಾಣ್ಯಗಳ ಗುಣಮಟ್ಟ ಹಾಗೂ ಲೋಹ ಆ ಕಾಲದ ಆರ್ಥಿಕ ಪರಿಸ್ಥಿತಿಯನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಗುಪ್ತ ವಂಶದ ಮೊದಲ ದೊರೆಗಳು ಆರ್ಥಿಕ ಸುಭಿಕ್ಷೆಯ ಸೂಚಕವಾಗಿ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದರೆ ನಂತರದ ದೊರೆಗಳು ಬೆಳ್ಳಿ ಹಾಗೂ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತರುವ ಮೂಲಕ ಆರ್ಥಿಕ ಆದೋಗತಿಯನ್ನು ಬಿಂಬಿಸುತ್ತಾರೆ. ನಾಣ್ಯಗಳು ಸಾಮ್ರಾಜ್ಯಗಳ ವಿಶಾಲತೆಯನ್ನು ಸೂಚಿಸುವುದರೊಂದಿಗೆ ಆಗಿನ ಕಾಲದ ಜನರ ಕಲಾತ್ಮಕ ನೈಪುಣ್ಯತೆ ಮತ್ತು ಲೋಹಶಾಸ್ತ್ರದಲ್ಲಿನ ಅವರ ಬೆಳವಣಿಗೆಯನ್ನು ತಿಳಿಸುತ್ತವೆ.

3.                ಸ್ಮಾರಕಗಳು :


ಕಲೆ, ವಾಸ್ತುಶಿಲ್ಪ ಮತ್ತು ಚಿತ್ರಕಲೆಗಳು ಇತಿಹಾಸ ರಚನೆಗೆ ಬಹು ಉಪಯುಕ್ತ ಆಧಾರಗಳಾಗಿವೆ. ಇವುಗಳು ಆಗಿನ ಕಾಲದ ಜನರ ಮತ್ತು ರಾಜರ ಅಭಿರುಚಿ, ಮನೋಭಾವನೆಗಳನ್ನು ಮೌನವಾಗಿ ಇತಿಹಾಸಕ್ಕೆ ಉಣಬಡಿಸುತ್ತವೆ. ಭಾರತದಲ್ಲಿನ ಪುರಾತನ ಸ್ಮಾರಕಗಳೆಂದರೆ ಬೌದ್ಧ ಸ್ತೂಪಗಳು, ವಿಹಾರಗಳು, ಜೈನ ಚೈತ್ಯಾಲಯಗಳು. ಸ್ಮಾರಕಗಳನ್ನು ನಿರ್ಮಿಸಲು ಬಳಸಿರುವ ವಸ್ತುಗಳು ಹಾಗೂ ಕಲಾತ್ಮಕ ನೈಪುಣ್ಯತೆ ಆಗಿನ ಕಾಲದ ಜನರ ಆರ್ಥಿಕ ಸ್ಥಿತಿ ಹಾಗೂ ತಜ್ಞತೆಯ ಜ್ಞಾನದ ಅರಿವನ್ನು ಪ್ರತಿಬಿಂಬಿಸುತ್ತವೆ. ಪಾಟಲಿಪುತ್ರದ ಸಂಶೋಧನೆಯಿಂದಾಗಿ ಮೌರ್ಯರ ಆರಮನೆಯ ನಿವೇಶನ ಹಾಗೂ ಆದರ ಸ್ಮಾರಕಗಳು ಕಲಾತ್ಮಕ ಸೌಂದರ್ಯವನ್ನು ಹಾಗೂ ಪರ್ಷಿಯಾದ ಪ್ರಭಾವವನ್ನು ತಿಳಿಸುತ್ತವೆ. ಸ್ಮಾರಕಗಳು ರಾಜರ ಧಾರ್ಮಿಕ ನೀತಿ, ನಂಬಿಕೆಗಳನ್ನು ಪ್ರಚುರಪಡಿಸುತ್ತವೆ. ಸ್ಮಾರಕಗಳನ್ನು ಅಧ್ಯಯನ ಮಾಡಿದಾಗ ಭಾರತದ ಕಲೆಯ ಮೇಲೆ ರೋಮನ್ ಪ್ರಭಾವ ಅಗಾಧವಾಗಿರುವುದನ್ನು ಕಾಣಬಹುದು. ದೇವಾಲಯ ನಿರ್ಮಾಣ ಕಲೆಯು ಗುಪ್ತರ ನಂತರ ಬೆಳೆಯಲು ಬೌದ್ಧ ಹಾಗೂ ಜೈನ ಕಲೆಗಳು ಪ್ರಭಾವ ಬೀರಿದವು. ಬೌದ್ಧ ಧರ್ಮದ ಬೆಳವಣೆಗೆಯೊಂದಿಗೆ ವಾಸ್ತುಶಿಲ್ಪವು ಬೆಳವಣಿಗೆಗೊಂಡಿತು. ವಿಗ್ರಹ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಲೋಹ ಹಾಗೂ ಶಿಲೆಯನ್ನು ಬಳಸಲಾರಂಭಿಸಿದ್ದರಿಂದಾಗಿ ಆನೇಕ ಸ್ಮಾರಕಗಳು ಇಂದಿಗೂ ಉಳಿಯಲು ಕಾರಣವಾಯಿತು. ಸಿಂಧೂ ಕಣಿವೆಯ ನಾಗರಿಕತೆಯ ಜನ ಬಹುಕಾಲ ನಶಿಸದ ವಸ್ತುಗಳಿಂದ ವಸ್ತುಗಳನ್ನು ನಿರ್ಮಿಸಿದ್ದರಿಂದಾಗಿ ಇಂದಿಗೂ ಆಗಿನ ಅವಶೇಷಗಳು ಉಳಿದಿವೆ. ಸಿಂಧೂ ನಾಗರಿಕತೆಯಿಂದ ಗಾಂಧಾರ ಕಲೆ ಉದಯಿಸುವವರೆಗಿನ ನಡುವಣ ಕಾಲದಲ್ಲಿ ಮರಮುಟ್ಟು ಮುಂತಾದ ಶೀಘ್ರ ನಶಿಸುವ ವಸ್ತುಗಳಿಂದ ಕಲಾಕೃತಿಗಳನ್ನು ನಿರ್ಮಿಸಿದ್ದರಿಂದಾಗಿ ಈ ಅವಧಿಯ ಸ್ಮಾರಕಗಳು ನಮಗೆ ಹೆಚ್ಚಾಗಿ ದೊರೆಯುವುದಿಲ್ಲ. ಪ್ರಾಚೀನ ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಆರಿಯಲು ಹಿಂದಿನ ವಾಸ್ತುಶಿಲ್ಪದ ಸ್ಮಾರಕಗಳು ಸಹಾಯವಾಗುತ್ತವೆ. ಮಥುರಾ ಮತ್ತು ಸಾರಾನಾಥಗಳಲ್ಲಿ ಸಿಕ್ಕಿರುವ ಬುದ್ಧನ ವಿಗ್ರಹಗಳು ಇಂದಿಗೂ ಮೂರ್ತಿಶಿಲ್ಪದ ಶ್ರೇಷ್ಟತೆಯ ದ್ಯೋತಕವಾಗಿವೆ.

 

ಪ್ರಾಚೀನ ಕಾಲದ ಚಿತ್ರಕಲೆಯು ಇಂದು ನಶಿಸುವ ಹಂತದಲ್ಲಿದ್ದರೂ ಉಳಿದಿರುವ ಕೆಲವೇ ಚಿತ್ರಗಳು ಭಾರತೀಯರ ಚಿತ್ರಕಲೆಯ ಬಗೆಗಿನ ಪ್ರೇಮ ಹಾಗೂ ಬೆಳವಣಿಗೆಯ ಬಗ್ಗೆ ಬೆಳಕನ್ನು ಚೆಲ್ಲುತ್ತವೆ. ಉದಾಹರಣೆಗೆ ಅಜಂತಾ ಗುಹಾಲಯದ ಚಿತ್ರಗಳಲ್ಲಿ ಅರಮನೆಯ ವೈಭವ, ರಾಜಕುಮಾರರ, ಅಂತಃಪುರದ ಸೇವಕಿಯರ ವೇಷಭೂಷಣಗಳು, ರೈತರ, ಸನ್ಯಾಸಿಗಳ, ಭಿಕ್ಷುಕರ ಸ್ಥಿತಿಗತಿಯ ಬಗ್ಗೆ ಹಾಗೂ ಆ ಕಾಲದಲ್ಲಿದ್ದ ವನ್ಯಮೃಗ, ಪಕ್ಷಿ ಮತ್ತು ಸಸ್ಯ ಸಂಕುಲಗಳ ಬಗ್ಗೆ ವಿಶೇಷ ಮಾಹಿತಿಯನ್ನು ನೀಡುತ್ತವೆ. ಈ ಗುಹಾಲಯಗಳಲ್ಲಿನ ಚಿತ್ರಗಳ ರಚನೆ ಶತಶತಮಾನಗಳ ಹಿಂದೆ ಆಗಿದ್ದರೂ ಇಂದಿಗೂ ಅವುಗಳ ಕೋರೈಸುವ ವರ್ಣ ವೈಖರಿಯನ್ನು ನೋಡಿದಾಗ ಅವರಿಗಿದ್ದ ವರ್ಣಮಿಶ್ರಣದ ಜ್ಞಾನವನ್ನು ಪ್ರತಿಬಿಂಬಿಸುತ್ತದೆ.

 

ಆಕೆಮೇನಿಯನ್ ಸಾಮ್ರಾಜ್ಯದ ಅವಧಿಯಲ್ಲಿ ವಿದೇಶಿಯರಿಂದ ರಚಿತವಾದ ಬರವಣಿಗೆಗಳಲ್ಲಿ ಭಾರತದ ಸಿಂಥ್ ಪ್ರಾಂತ್ಯದ ಫಲವತ್ತತೆ, ದಟ್ಟ ಕಾಡು, ಹೇರಳ ಮಳೆ ಸುರಿಯುವ ಅಂಶವನ್ನು ಬೆಂಬಲಿಸುವಂತೆ ಸಿಂಧೂ ನದಿ ಬಯಲಿನ ನಾಗರಿಕತೆಯು ಗೋಚರಿಸಿದೆ. ಇಲ್ಲಿನ ನಗರೀಕರಣ ಮತ್ತು ಬೃಹತ್ ಕಟ್ಟಡಗಳ ಅವಶೇಷಗಳು ಎಲ್ಲರನ್ನು ಚಕಿತಗೊಳಿಸಿವೆ. ಪಲ್ಲವರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು ನಿರ್ಮಿಸಿದ * ಬೃಹತ್ ಸುಂದರ ದೇವಾಲಯಗಳು ಇಂದಿಗೂ ಉಳಿದು ವಾಸ್ತುಶಿಲ್ಪಕ್ಕೆ ಹೆಸರಾಗಿರುವುದೇ ಅಲ್ಲದೆ ದೇವಾಲಯಗಳ ಹೊರಗೋಡೆಗಳ ಮೇಲೆ ಚಿತ್ರಿಸಿರುವ ಕೆತ್ತನೆಗಳು ಆ ಕಾಲದ ಜನರ ಉಡುಗೆ-ತೊಡುಗೆ, ನೃತ್ಯ, ಸಂಗೀತ, ವಾದ್ಯ ಮುಂತಾದ ಹವ್ಯಾಸಗಳು, ಯುದ್ಧಾಯುಧಗಳ ಬಗ್ಗೆ ತಿಳಿಸುತ್ತವೆ. ಒಟ್ಟಾರೆ ಒಂದು ರಾಷ್ಟ್ರದ ಸಂಸ್ಕೃತಿಯ ತಿರುಳನ್ನು ಆಯಾ ರಾಷ್ಟ್ರದ ಅಳಿಯದೇ ಉಳಿದ ಕಲಾಸ್ಮಾರಕಗಳು ಪ್ರತಿಬಿಂಬಿಸುತ್ತವೆ ಎಂಬ ಅಂಶ ಬಹು ಸತ್ಯವಾದುದು.

 

ಬರವಣಿಗೆಯ ಆಧಾರಗಳು

 


ಪ್ರಾಚೀನ ಭಾರತೀಯರಾದ ಸಿಂಧೂ ಸಂಸ್ಕೃತಿಯ ಜನರು ಕ್ರಿ.ಪೂ. 2500ಕ್ಕಿಂತಲೂ ಹಿಂದೆಯೇ ಬರವಣಿಗೆಯನ್ನು ತಿಳಿದಿದ್ದು ಅದರ ಅವಶೇಷಗಳಾಗಿ ಅನೇಕ ಮುದ್ರೆಗಳನ್ನು ಬಿಟ್ಟುಹೋಗಿದ್ದಾರೆ. ಆದರೆ ನಮಗೆ ಅವುಗಳನ್ನು ಓದಲಾಗಿಲ್ಲ. ನಾಗಾರ್ಜುನಕೊಂಡದ ಕ್ರಿ.ಪೂ. 2ನೇ ಶತಮಾನದಲ್ಲಿ ರಚನೆಯಾದ ಶಿಲ್ಪಕಲೆಯಲ್ಲಿ ಮೂವರು ಭವಿಷ್ಯವಾದಿಗಳು ಭಗವಾನ್ ಬುದ್ಧನ ತಾಯಿ ರಾಣಿ ಮಾಯಳ ಕನಸನ್ನು ರಾಜ ಶುದ್ಧೋದನನಿಗೆ ವಿವರಿಸುವ ದೃಶ್ಯವಿದೆ. ಈ ದೃಶ್ಯದ ಕೆಳಗೆ ಈ ವಿವರಣೆಯನ್ನು ಕುಳಿತು ಬರೆದುಕೊಳ್ಳುತ್ತಿರುವ ಬರಹಗಾರನ ಚಿತ್ರವಿದೆ. ಬಹುಶಃ ಭಾರತದ ಬರವಣಿಗೆಯ ಕಲೆಯನ್ನು ಸೂಚಿಸುವ ಪ್ರಥಮ ಚಾರಿತ್ರಿಕ ದಾಖಲೆ ಇದಾಗಿದೆಯೆಂದು ಹೇಳಬಹುದು. ಆದರೆ ನಮಗೆ ಸಿಕ್ಕಿರುವ ಹೆಚ್ಚಿನ ಲಿಖಿತ ಆಧಾರಗಳು ಕ್ರಿ.ಶ. 4ನೇ ಶತಮಾನಕ್ಕೆ ಸೇರಿದವಾಗಿವೆ. ಪ್ರಾಚೀನ ಮಾನವನು ತನ್ನ ಬರವಣಿಗೆಯನ್ನು ಮರದ ತೊಗಟೆ ಮತ್ತು ತಾಳೆಗರಿಯ ಮೇಲೆ, ಹತ್ತಿಬಟ್ಟೆಯ ಮೇಲೆ, ಮಧ್ಯ ಏಷ್ಯಾದ ಜನರು ಕುರಿಯ ಚರ್ಮದ ಮೇಲೆ ಹಾಗೂ ಮರದ ಹಲಗೆಯ ಮೇಲೂ ಬರೆಯುತ್ತಿದ್ದರು. ಆದ್ದರಿಂದ ಈ ಅವಧಿಯ ಬರವಣಿಗೆಗಳು ನಾಶವಾಗಿ ನಮಗೆ ದೊರೆತಿಲ್ಲ. ಆದರೆ ನಂತರದ ಮಾನವನು ಲೋಹ ಹಾಗೂ ಶಿಲೆಗಳ ಮೇಲೆ ಬರವಣಿಗೆಯನ್ನು ಪ್ರಾರಂಭಿಸಿದ್ದರಿಂದ ಅನೇಕ ಲಿಖಿತ ಆಧಾರಗಳು ಲಭ್ಯವಾಗಲು ಕಾರಣವಾಯಿತು. ಇಂದು ನಮಗೆ ದೊರೆತಿರುವ ಬಹುತೇಕ ಬರವಣಿಗೆಗಳು ತಾಳೆಗರಿಯಲ್ಲಿ ಬರೆದವಾಗಿವೆ. ಸಂಸ್ಕೃತ ಬರಹಗಳು ದಕ್ಷಿಣ ಭಾರತ, ಕಾಶ್ಮೀರ ಹಾಗೂ ನೇಪಾಳಗಳಲ್ಲಿ ಹೆಚ್ಚಾಗಿ ದೊರೆತಿವೆ. ಇಂತಹ ಪ್ರಾಚೀನ ಬರಹಗಳನ್ನೊಳಗೊಂಡ ಶಾಸನಗಳನ್ನು ವಸ್ತುಸಂಗ್ರಾಹಾಲಯದಲ್ಲೂ, ಕೈಬರಹದ ತಾಳೆಗರಿ, ತಾಮ್ರ ಪತ್ರ ಮುಂತಾದುವುಗಳನ್ನು ಪುಸ್ತಕಾಲಯ ಹಾಗೂ ಪತ್ರಾಗಾರಗಳಲ್ಲಿ ಸಂರಕ್ಷಿಸಿಡಲಾಗಿದೆ.

 

ಬರವಣಿಗೆಯ ಆಧಾರಗಳನ್ನು ಅಧ್ಯಯನದ ಅನುಕೂಲಕ್ಕಾಗಿ ಎರಡು ವಿಭಾಗಗಳಾಗಿ ವಿಂಗಡಿಸಬಹುದು.

 

1. ದೇಶೀಯ ಬರವಣಿಗೆಗಳು

2. ವಿದೇಶಿ ಬರವಣಿಗೆಗಳು

 

ದೇಶೀಯ ಬರವಣಿಗೆಗಳು

 

ದೇಶೀಯ ಬರವಣಿಗೆಗಳು ಬ್ರಾಹ್ಮ, ಖರೋಷ್ಟಿ, ಪಾಳಿ, ಪ್ರಾಕೃತ, ಸಂಸ್ಕೃತ ಮತ್ತು ದ್ರಾವಿಡ ಭಾಷೆಗಳಾದ ಕನ್ನಡ. ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಹಾಗೂ ಲಿಪಿಗಳಲ್ಲಿ ರಚಿತವಾದ ಬರವಣೆಗೆಗಳು ಇತಿಹಾಸ ರಚನೆಗೆ ಉಪಯುಕ್ತ ಮಾಹಿತಿಯನ್ನೊದಗಿಸುತ್ತವೆ. ಈ ಬರವಣಗೆಗಳಲ್ಲಿ ಅಡಕಗೊಂಡಿರುವ ಅಂಶಗಳು, ಅವು ಪ್ರತಿನಿಧಿಸುವ ಕ್ಷೇತ್ರ. ಭೂ ಪ್ರದೇಶಗಳ ಆಧಾರದ ಮೇಲೆ ದೇಶೀಯ ಬರವಣಿಗೆಗಳನ್ನು

 

1) ಧಾರ್ಮಿಕ ಸಾಹಿತ್ಯ

2) ಕಾವ್ಯ ಸಾಹಿತ್ಯ

3) ಐತಿಹಾಸಿಕ ಕಾವ್ಯಗಳು

4) ವೈಜ್ಞಾನಿಕ ಸಾಹಿತ್ಯ

5) ಪ್ರಾಂತೀಯ ಭಾಷಾ ಸಾಹಿತ್ಯ

 ಎಂದು ವಿಂಗಡಿಸಬಹುದು.

 

1)                 ಧಾರ್ಮಿಕ ಸಾಹಿತ್ಯ :

ಪ್ರಾಚೀನ ಭಾರತದ ಲಿಖಿತ ಕೃತಿಗಳು ಹೆಚ್ಚಾಗಿ ಧಾರ್ಮಿಕ, ಮತೀಯ ಅಂಶಗಳಂತಹ ಆಲೌಕಿಕ ವಿಚಾರಗಳನ್ನೊಳಗೊಂಡ ಸಾಹಿತ್ಯಾತ್ಮಕ ಬರವಣಿಗೆಗಳಾಗಿವೆ. ಇಂತಹ ಧಾರ್ಮಿಕ ಸಾಹಿತ್ಯವನ್ನು ಅವುಗಳು

ಪ್ರತಿಪಾದಿಸುವ ಧರ್ಮಗಳ ಆಧಾರದ ಮೇಲೆ

 

1)      ವೈದಿಕ ಸಾಹಿತ್ಯ

2)      ಬೌದ್ಧ ಸಾಹಿತ್ಯ

3)      ಜೈನ ಸಾಹಿತ್ಯ

ಎಂದು ಮರು ವಿಂಗಡಣೆ ಮಾಡಬಹುದು.

 

ವೈದಿಕ ಸಾಹಿತ್ಯ

 

ಭಾರತದ ಸಂಸ್ಕೃತಿಗೆ ಹಾಗೂ ಇತಿಹಾಸಕ್ಕೆ ವೈದಿಕ ಸಾಹಿತ್ಯವು ಅಪಾರವಾದ ಕೊಡುಗೆಯನ್ನು ನೀಡಿದೆ. ವೈದಿಕ . ಸಾಹಿತ್ಯದ ಪ್ರಮುಖ ಕೃತಿಗಳೆಂದರೆ.

 

1)     ನಾಲ್ಕು ವೇದಗಳು :

 ಋಗ್ರೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವಣವೇದ. ಮೊದಲ ಮೂರು ವೇದಗಳನ್ನು 'ತ್ರಯಿ' ಎನ್ನುತ್ತಾರೆ ಮತ್ತು ಪ್ರತಿಯೊಂದು ವೇದವನ್ನು ಸಂಹಿತಗಳಾಗಿ ವಿಭಾಗಿಸಲಾಗಿದೆ. ವೇದಗಳು ಮೊದಲಿನ ಆರ್ಯರು ಸ್ಥಳೀಯ ದಸ್ಯುಗಳ ವಿರುದ್ಧ ಹೋರಾಡಿ ತಮ್ಮ ಅಧಿಪತ್ಯವನ್ನು ಆರ್ಯಾವರ್ತದಲ್ಲಿ ಸ್ಥಾಪಿಸಿದುದನ್ನು ತಿಳಿಸುತ್ತವೆ. ಅಂದಿನ ರಾಜಕೀಯ ಸಂಸ್ಥೆಗಳಾದ ಸಭಾ ಮತ್ತು ಸಮಿತಿಯ ಬಗ್ಗೆ, ನಂತರದ ಆರ್ಯರು ಮಧ್ಯ ಭಾರತ, ಪೂರ್ವ ಭಾರತ ಹಾಗೂ ವಿವಿಧ ಭಾಗಗಳಲ್ಲಿ ನೆಲೆಸಿದುದನ್ನು ತಿಳಿಸುತ್ತವೆ. ಋಗೈದವು ತಿಳಿಸುವ ಹತ್ತು ರಾಜರ ನಡುವಣ ಯುದ್ಧದಂತಹ ಘಟನೆಗಳು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸುವ ನಿಟ್ಟಿನ ಮೊದಲ ಪ್ರಯತ್ನಗಳಾಗಿದ್ದವು. ಒಟ್ಟಾರೆ ವೇದಗಳು ಇತಿಹಾಸದ ರಚನೆಗೆ ಅರೆ ಇತಿಹಾಸ ಆಕರಗಳಾಗಿವೆಯೆಂದು ಹೇಳಬಹುದು.

 

2)      ಬ್ರಾಹ್ಮಣಗಳು :

ಬ್ರಾಹ್ಮಣಗಳು ವೇದಗಳಲ್ಲಿನ ಮಂತ್ರಗಳನ್ನು ಗದ್ಯ ರೂಪದಲ್ಲಿ ವಿವರಿಸುತ್ತವೆ. ವೇದಮಂತ್ರಗಳ ಅರ್ಥವಿವರಣೆ ನೀಡುವುದರ ಜೊತೆಗೆ ಯಜ್ಞಯಾಗಾದಿ ಆಚರಣೆಯ ಬಗ್ಗೆ ದೀರ್ಘ ವಿವರಣೆ ನೀಡುತ್ತವೆ. ಜೊತೆಗೆ ಆ ಕಾಲದ ರಾಜರು, ರಾಜಕೀಯ ಸನ್ನಿವೇಶಗಳ ಚಿತ್ರಣವನ್ನು ಒಳಗೊಂಡಿವೆ. ಐತ್ತರೇಯ ಬ್ರಾಹ್ಮಣದಲ್ಲಿ ಆಗಿನ ಕಾಲದ ಸಮಾಜ, ರಾಷ್ಟ್ರ ಜೀವನದ ಉಗಮ, ರಾಜನ ಗುಣ ಕರ್ಮಗಳು ಮುಂತಾದ ವಿವರಗಳು ದೊರೆಯುತ್ತವೆ.

 

3)      ಪುರಾಣಗಳು :

ಪುರಾಣಗಳಲ್ಲಿರುವ ಅರಸರ ವಂಶಾವಳಿಗಳು, ಪ್ರಮುಖ ಕಾಲಗಳು, ಘಟನೆಗಳು ಇತಿಹಾಸ ರಚನೆಗೆ ಸಹಾಯಕವಾಗುತ್ತವೆ. ಪುರಾಣಗಳಲ್ಲಿ ನಂದ, ಮೌರ್ಯ, ಶುಂಗ, ಕಣ್ವ, ಶಾತವಾಹನ ಮತ್ತು ಗುಪ್ತ ವಂಶಗಳ ಐತಿಹಾಸಿಕ ಸಂಗತಿಗಳು ಅಡಕವಾಗಿವೆ. ವಾಯುಪುರಾಣವು ಗುಪ್ತರು ಅಧಿಕಾರಕ್ಕೆ ಬಂದ ಹಂತಗಳನ್ನು ಹಾಗೂ ಆಡಳಿತದ ಪ್ರಮುಖ ಘಟನೆಗಳನ್ನು ತಿಳಿಸುತ್ತದೆ. ಹಾಗೆಯೇ ವಿಷ್ಣುಪುರಾಣವು ಮಹಾಭಾರತದ ಅವಧಿಯಿಂದ ಹಸಿನಾಪುರದಲ್ಲಿ ಆಳಿದ ರಾಜರುಗಳ ಬಗ್ಗೆ ತಿಳಿಸುತ್ತದೆ.

4)      ರಾಮಾಯಣ ಮತ್ತು ಮಹಾಭಾರತ :


ರಾಮಾಯಣವು ಅಂದಿನ ಕಾಲದ ಆರ್ಯರ ನಾಗರಿಕತೆ. ರಾಜಕೀಯ, ಭೌಗೋಳಿಕ, ಸಾಮಾಜಿಕ, ಧಾರ್ಮಿಕ ಪರಿಸ್ಥಿತಿಗಳ ಬಗ್ಗೆ ವಿಪುಲವಾದ ಮಾಹಿತಿಗಳನ್ನೊಳಗೊಂಡಿದೆ. ಐತಿಹಾಸಿಕವಾಗಿ ರಾಮಾಯಣವು ಆರ್ಯ ಧರ್ಮವು ಹೇಗೆ ಭಾರತಕ್ಕೆಲ್ಲಾ ವ್ಯಾಪಿಸಿತು ಎಂಬ ಅಂಶವನ್ನೊಳಗೊಂಡದ್ದೇ ಆಗಿದೆ. ಮಹಾಭಾರತವು ಚಾರಿತ್ರಿಕ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕತೆ, ಸಂಸ್ಕೃತಿಯ ವಿವಿಧ ಮುಖಗಳನ್ನು ತಿಳಿಸುತ್ತದೆ. ಅಖಿಲ ಭಾರತದ ಸಮಗ್ರ ಭೌಗೋಳಿಕ ಚಿತ್ರಣವನ್ನು ಪ್ರತಿಬಿಂಬಿಸುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಿದ ಭಾರತದ ವಿವಿಧ ಮೂಲೆಗಳ ರಾಜ್ಯ ಹಾಗೂ ರಾಜರ ಹೆಸರುಗಳನ್ನು ತಿಳಿಸುತ್ತದೆ. ದಕ್ಷಿಣ ಭಾರತದ ಚೇರ, ಪಾಂಡ್ಯ ರಾಜರುಗಳ ವಿಷಯವನ್ನೊಳಗೊಂಡಿದ್ದು ಇದು ದಕ್ಷಿಣ ಭಾರತದ ಇತಿಹಾಸ ರಚನೆಗೆ ಅನುಕೂಲವಾಗಿದೆ. ಮಹಾಭಾರತದಲ್ಲೇ ಬರುವ ಭಗವದ್ಗೀತೆಯು ಭಾರತೀಯ ದರ್ಶನದ ಕರ್ಮಮಾರ್ಗ ಹಾಗೂ ಭಕ್ತಿ ಮಾರ್ಗಗಳನ್ನು ಬೋಧಿಸುತ್ತದೆ.

 

ಹೀಗೆ ವೈದಿಕ ಸಾಹಿತ್ಯವು ಭಾರತೀಯರ ಮೊದಮೊದಲಿನ ಜೀವನ ಕ್ರಮವನ್ನು ಹಾಗೂ ಅವರ ವಿಚಾರ ಸರಣಿಗಳನ್ನು ಕುರಿತು ತಿಳಿಸುತ್ತದೆ. ವೈದಿಕ ಸಾಹಿತ್ಯದ ಪ್ರಾಚೀನತೆಯಿಂದಾಗಿ ಜಗತ್ತಿನ ಇತಿಹಾಸದಲ್ಲಿ ಅದಕ್ಕೆ ಅತ್ಯಂತ ಮಹತ್ವವಿದೆ.

 

ಬೌದ್ಧ ಸಾಹಿತ್ಯ

 

ಕ್ರಿ. ಪೂ 6ನೇ ಶತಮಾನದಲ್ಲಿ ಏಳಿಗೆ ಹೊಂದಿದ ಹೊಸ ಧರ್ಮಗಳಲ್ಲಿ ಬೌದ್ಧ ಧರ್ಮವು ಅತ್ಯಂತ ಪ್ರಮುಖವಾದುದು. ಬೌದ್ಧ ಸಾಹಿತ್ಯವು ಪಾಳಿ ಭಾಷೆಯಲ್ಲಿ ಹೆಚ್ಚು ರಚಿತವಾದುದಾಗಿದೆ. ಪಾಳಿ ಎಂದರೆ ಸರಳ ಅಥವಾ ಪವಿತ್ರ ಎಂದರ್ಥ. ಪಾಳಿ ಶಬ್ದದ ಮತ್ತೊಂದು ಅರ್ಥ 'ಸಾಲು' ಎಂದಾಗುತ್ತದೆ. ಅಂದರೆ ಅದು ಮೂಲಪಾಠದ ಅರ್ಥವನ್ನು ಸೂಚಿಸುತ್ತದೆ. ಮೊದಲಿನ ಬೌದ್ಧ ಧರ್ಮಶಾಸ್ತ್ರ ಅಥವಾ ತ್ರಿಪಿಟಕವು ಪಾಳಿ ಭಾಷೆಯಲ್ಲಿದೆ. ಗೌತಮ ಬುದ್ಧನು ಜನಸಾಮಾನ್ಯರ ಅಂದಿನ ಭಾಷೆಯಾಗಿದ್ದ ಪಾಳಿಯಲ್ಲಿ ತಿಳಿಯುವಂತೆ ಬೋಧಿಸಿದನು. ಹೀಗೆ ಬೋಧಿಸಿದ ಬುದ್ಧನ ಹಾಗೂ ಅವನ ಪ್ರಧಾನ ಶಿಷ್ಯರ ಬೋಧನೆಗಳನ್ನು ತ್ರಿಪಿಟಕಗಳಲ್ಲಿ ಸಂಗ್ರಹಿಸಲಾಯಿತು. ಮೂರು ಪಿಟಕಗಳಾವುವೆಂದರೆ, ವಿನಯಪಿಟಕ. ಸುತ್ತಪಿಟಕ ಮತ್ತು ಅಭಿದಮೃಪಿಟಕ. ಇವುಗಳನ್ನು ತ್ರಿರತ್ನಗಳೆಂದು ಸಹ ಕರೆಯಲಾಗಿದೆ.

 

ವಿನಯ ಪಿಟಕ : ಇದು ಮುಖ್ಯವಾಗಿ ಬೌದ್ಧ ಧರ್ಮದಲ್ಲಿನ ಸನ್ಯಾಸಿ ಹಾಗೂ ಸನ್ಯಾಸಿನಿಯರಿಗೆ ನಿಯಮ ಮತ್ತು ನಿಬಂಧನೆಗಳ ಬಗ್ಗೆ ತಿಳಿಸುತ್ತದೆ. ಅಲ್ಲದೆ ಬೌದ್ಧ ಧರ್ಮದ ಸಂಘಗಳ ಬೆಳವಣಿಗೆ, ಬುದ್ಧನ ಜೀವನ. ಉಪದೇಶಗಳು, ಭಿಕ್ಷು, ಭಿಕ್ಷುಣಿಯರ ಆಚಾರ ವಿಚಾರಗಳ ವಿರಣೆಗಳನ್ನೊಳಗೊಂಡಿದೆ.

 

ಸುತ್ತ ಪಿಟಕ : ಇದರಲ್ಲಿ ಬುದ್ಧನು ಜನಸಾಮಾನ್ಯರಿಗೆ ಸಂಘ, ಸಭೆಗಳಲ್ಲಿ ಉಪದೇಶಿಸಿದ ವಿಚಾರಗಳನ್ನೊಳಗೊಂಡಿದೆ. ಹಾಗೆಯೇ ಬುದ್ದನ ಪ್ರಮುಖ ಶಿಷ್ಯರಾದ ಸಾರಿಪುತ್ತ, ಆನಂದ, ಮೊಗ್ಗಲಾನ ಮುಂತಾದವರು ಉಪದೇಶಿಸಿದ ಆಚಾರ ಸಂಹಿತೆಯನ್ನೊಳಗೊಂಡಿದೆ.

 

ಅಭಿದಮ್ಮ ಪಿಟಕ : ಇದು ಬುದ್ಯೋಪದೇಶದ ತತ್ವಶಾಸ್ತ್ರ ಸಾಗರವನ್ನೇ ಒಳಗೊಂಡಿದೆ. ಇದು ಮನಸ್ಸಿನ ವಸ್ತು ವಿಚಾರಗಳ ಬಗ್ಗೆ ವಿವರಣೆಯನ್ನೊಳಗೊಂಡು ಅವುಗಳ ನಿಜ ಸ್ವರೂಪದ ಬಗ್ಗೆ ಅವಲೋಕಿಸುತ್ತದೆ.

 

ತ್ರಿಪಿಟಕಗಳ ಐತಿಹಾಸಿಕ ಮಹತ್ವ : ಪಿಟಕಗಳು ಬುದ್ಧನ ಜೀವನ, ಅವನ ಉಪದೇಶಗಳು ಮತ್ತು ಅವನ ಪಂಥಗಳ ಮೇಲೆ ಬೆಳಕು ಚೆಲ್ಲುತ್ತವೆ. ಬೌದ್ಧ ಧರ್ಮದ ಉಗಮದ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಕೊಡುವುದರ ಜೊತೆಗೆ ಬುದ್ಧನ ಪ್ರಮುಖ ಅನುಯಾಯಿಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತವೆ. ಅಲ್ಲದೆ ಬಿಂಬಸಾರ, ಅಜಾತರತ್ಯ ಮತ್ತು ಇತರ ರಾಜರುಗಳ ಸಾಧನೆಗಳನ್ನು ಕುರಿತು ವಿಷಯಗಳನ್ನು ತಿಳಿಸುತ್ತವೆ. ಆಸಂಖ್ಯ ಪಟ್ಟಣಗಳು. 16 ಮಹಾಜನಪದಗಳು, ಅಂಗ, ಮಗಧ, ಕೋಸಲ, ಕಾಶಿ ರಾಜ್ಯಗಳ ಬಗ್ಗೆ ತ್ರಿಪಿಟಕಗಳು ಹೇಳುತ್ತವೆ. ಒಟ್ಟಾರೆ ತ್ರಿಪಿಟಕಗಳು ಅಂದಿನ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸಗಳ ಬಗ್ಗೆ ಮಹತ್ವಪೂರ್ಣ ಮಾಹಿತಿ ನೀಡುತ್ತವೆ.

ದೀಘನಿಕಾಯ : ಇದು ಆತ್ಮದ ಮೇಲಿದ್ದ ವೇದಾಂತಿಕ ಕಲ್ಪನೆಗಳನ್ನು ಅಲ್ಲಗಳೆಯುತ್ತದೆ. ಇದು ಆ ಕಾಲದಲ್ಲಿದ್ದ ಅನೇಕ ಉದ್ಯೋಗಗಳ ಹೆಸರುಗಳನ್ನು ಹೇಳುತ್ತಾ ಸಾಮಾಜಿಕ ಜೀವನದ ಮೇಲೂ ಬೆಳಕು ಚೆಲ್ಲುತ್ತದೆ. ಬುದ್ಧನ ಕಾಲದಲ್ಲಿ ಸಾಮಾಜಿಕ ಪದ್ಧತಿಯು ಅಷ್ಟೇನೂ ಕಟ್ಟುನಿಟ್ಟಾಗಿರಲಿಲ್ಲವೆಂದು, ಹುಟ್ಟು, ವರ್ಣ, ವೇದ ಜ್ಞಾನ ಇತ್ಯಾದಿಗಳಿಂತಲೂ ಚಾರಿತ್ರ್ಯಕ್ಕೆ ಅತ್ಯಂತ ಮಹತ್ವ ನೀಡಲಾಗುತಿತ್ತೆಂದು ಇದು ತಿಳಿಸುತ್ತದೆ.

ಅಂಗುತ್ತರನಿಕಾಯ : ಬೌದ್ಧ ಸಾಹಿತ್ಯದಲ್ಲಿ ಇತಿಹಾಸದ ದೃಷ್ಟಿಯಿಂದ ಅಂಗುತ್ತರ ನಿಕಾಯವು ಬಹಳ ಪ್ರಮುಖವಾದುದು. ಇದು ಕ್ರಿ. ಪೂ 6ನೇ ಶತಮಾನದ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಪರಿಸ್ಥಿತಿಯ ಬಗ್ಗೆ ಉತ್ತಮ ಹಾಗೂ ಕರಾರುವಕ್ಕಾದ ಮಾಹಿತಿ ನೀಡುತ್ತದೆ. ಪ್ರಾಚೀನ ಭಾರತದಲ್ಲಿದ್ದ 16 ಮಹಾಜನಪದಗಳ ಬಗ್ಗೆ ವಿಶೇಷವಾಗಿ ತಿಳಿಸುತ್ತದೆ.

ಕಥಾವಸ್ತು : ಕ್ರಿ. ಪೂ 234ರಲ್ಲಿ ಅಶೋಕನಿಂದ ಸಮಾವೇಶಗೊಂಡ 3ನೇ ಬೌದ್ಧ ಮಹಾಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು 'ಕಥಾವಸ್ತು' ಎಂಬ ಹೆಸರಿನ ಗ್ರಂಥದಲ್ಲಿ ಸಂಗ್ರಹಿಸಲಾಯಿತು. ಇದರಲ್ಲಿ ಬೌದ್ಧ ಧರ್ಮದ ತತ್ವಗಳು ಹಾಗೂ ಬೌದ್ಧ ಧರ್ಮ ಪ್ರಚಾರ ಕಾರ್ಯದ ಬಗ್ಗೆ ಸ್ಕೂಲ ವಿವರಣೆಯಿದೆ.

ಸಿಲೋನಿ ವೃತ್ತಾಂತಗಳು : "ದೀಪವಂಶ" ಹಾಗೂ "ಮಹಾವಂಶ" ಇವೆರಡನ್ನು ಸೇರಿಸಿ “ಸಿಲೋನಿ ವೃತ್ತಾಂತಗಳೆಂದು ಕರೆಯುತ್ತಾರೆ. ದೀಪವಂಶವು ಕ್ರಿ. ಶ 4ನೇ ಶತಮಾನದಲ್ಲಿ ರಚಿಸಲ್ಪಟ್ಟಿತು. ಮಹಾವಂಶವು ಕ್ರಿ. ಶ. 6ನೇ ಶತಮಾನದಲ್ಲಿ ಮಹಾನಮನನೆಂಬ ಸನ್ಯಾಸಿಯಿಂದ ರಚಿಸಲ್ಪಟ್ಟಿತು. ಮಹಾವಂಶವು ಐತಿಹಾಸಿಕವಾಗಿ ಹಾಗೂ ಸಾಹಿತ್ಯಕವಾಗಿ ಮಹತ್ವಪೂರ್ಣ ಕೃತಿಯಾಗಿದೆ. ಇವುಗಳು ಸಿಲೋನಿನ ಧಾರ್ಮಿಕ ಇತಿಹಾಸದೊಂದಿಗೆ ಅನೇಕ ವಂಶಗಳ ಇತಿಹಾಸಗಳನ್ನು ಚಿತ್ರಿಸುತ್ತವೆ. ಅಲ್ಲದೆ ಉತ್ತರ ಭಾರತದ ರಾಜಕೀಯ ಪರಿಸ್ಥಿತಿಗಳನ್ನು ಕುರಿತು ಉತ್ತಮ ಮಾಹಿತಿ ನೀಡುತ್ತವೆ. ಡಾ| ಗೀಗರ್‌ರವರ ಪ್ರಕಾರ "ಸಿಲೋನಿ ವೃತ್ತಾಂತಗಳು ಪ್ರಾಚೀನ ಕಾಲದ ವ್ಯಾಖ್ಯಾನಗಳನ್ನೊಳಗೊಂಡ ಇತಿಹಾಸದ ಭಾಗಗಳಾಗಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಾವಿಭಾಷ ಗ್ರಂಥ : ಕಾನಿಷ್ಕನ ಕಾಲದಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಜರುಗಿನ 4ನೇ ಬೌದ್ಧ ಮಹಾಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಈ ಗ್ರಂಥದಲ್ಲಿ ಕ್ರೋಡೀಕರಿಸಲಾಗಿದೆ.

ಮಿಲಿಂದಪನ್ನ : ಬೌದ್ಧ ಧರ್ಮದಲ್ಲಿನ ಅನೇಕ ಸಮಸ್ಯೆಗಳು ಹಾಗೂ ವಿವಾದಗಳನ್ನು ಕುರಿತು ಬೌದ್ಧ ಪಂಡಿತ ನಾಗಸೇನನೊಡನೆ ಇಂಡೋ-ಗ್ರೀಕ್ ಅರಸ ಮೆನಾಂಡರನು ನಡೆಸಿದ ಧಾರ್ಮಿಕ ಚರ್ಚೆಯ ಪ್ರಶ್ನಾವಳಿಗಳ ವಿಷಯಗಳು ಈ ಗ್ರಂಥದಲ್ಲಿ ಸೇರಿವೆ. ಇದು ಪಾಳಿ ಭಾಷೆಯಲ್ಲಿನ ಅತ್ಯುತ್ತಮ ಕೃತಿಗಳಲ್ಲೊಂದಾಗಿದೆ.

ಬೌದ್ಧ ಜಾತಕ ಕಥೆಗಳು : ಜಾತಕ ಕಥೆಗಳು ಸುಮಾರು 5000ರಷ್ಟಿವೆ. ಈ ಕಥೆಗಳಲ್ಲಿ ದಂತಕಥೆಗಳು, ರೋಮಾಂಚಕ ಕಥೆಗಳು, ಹಾಸ್ಯ, ಜಾಣೆ ಮತ್ತು ನೀತಿಕಥೆಗಳು ಸೇರಿವೆ. ಇವುಗಳಲ್ಲಿ ಅನೇಕ ಕಥೆಗಳು ಬೌದ್ಧ ಧರ್ಮದ ನೈತಿಕ ಸತ್ಯಗಳನ್ನು ದೃಷ್ಟಾಂತ ಪೂರ್ವಕವಾಗಿ ಹೇಳಲ್ಪಟ್ಟಿವೆ. ಭಾರತದ ಬೌದ್ಧ ಕಲಾ ಕೇಂದ್ರಗಳಾದ ಬಾಲ್ಟುಟ್, ಸಾಂಚಿ, ಅಜಂತಾ ಮತ್ತು ಅಮರಾವತಿಗಳಲ್ಲಿನ ಶಿಲ್ಪಕಲೆ ಹಾಗೂ ವರ್ಣಚಿತ್ರಗಳಲ್ಲಿ ಜಾತಕ ಕಥೆಗಳ ಪ್ರಭಾವ ಕಂಡು ಬರುತ್ತದೆ. ಈ ಚಿತ್ರಗಳಲ್ಲಿ ಭಿತ್ತಿಗೊಂಡಿರುವ ಅಂಶಗಳು ಬುದ್ಧನ ಪೂರ್ವ ಅವಧಿ ಹಾಗೂ ಬುದ್ಧನ ಕಾಲದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳನ್ನು ಪುನರಚಿಸಲು ಮಹತ್ವವಾದ ಆಧಾರಗಳಾಗಿವೆ.

ಬುದ್ಧಚರಿತೆ : ಅಶ್ವಘೋಷನಿಂದ ರಚಿತವಾದ ಈ ಗ್ರಂಥವು ಬುದ್ಧನ ಜೀವನ ಚರಿತ್ರೆಯನ್ನೊಳಗೊಂಡಿದೆ. ಇವನ ಇತರ ಕೃತಿಗಳೆಂದರೆ ಸಾರಿಪುತ್ತ ಪ್ರಕರಣ, ಮಹಾಯಾನ, ಶ್ರದ್ಧೋತ್ಪಾದ, ಸೌಂದರ್ಯಾನಂದ ಕಾವ್ಯ, ವಜ್ರಸೂಚಿ ಮುಂತಾದವು.

 

ಈ ಕೆಳಕಂಡ ಗ್ರಂಥಗಳನ್ನು ಬೌದ್ಧ ಧರ್ಮದ ಸಾಹಿತ್ಯಾತ್ಮಕ ಕೊಡುಗೆಗಳೆಂದು ತಿಳಿಯಲಾಗಿದೆ.

 

1) ಮಹಾವಿಭಾಷ ಗ್ರಂಥ - ವಸುಮಿತ್ರ

2) ಅಸ್ತಸಹಶ್ರಿಕ - ಪ್ರಜ್ಞಾಪರಮಿತ

3) ಸದ್ಧರ್ಮ- ಪುಂಡಾರೀಕ

4) ಸುವರ್ಣ-ಪ್ರಭಾಸ

5) ತಥಾಗತ-ಗುಹಾಕ. 

ಇವುಗಳಲ್ಲದೆ ವಿವಿಧ ವಿದ್ವಾಂಸರಿಂದ ರಚಿತವಾದ ಸಮ್ಮದಿ ರಾಜ, ದಶಭೂಮೀಶ್ವರ, ಲಲಿತ ವಿಸ್ತಾರ, ಗಂಧವ್ಯೂಹ ಮುಂತಾದ ಬೌದ್ಧ ಸಾಹಿತ್ಯಕ ಆಧಾರಗಳು ಬುದ್ಧ ಮತ್ತು ಬೌದ್ಧ ಧರ್ಮದ ಬಗ್ಗೆ ತಿಳಿಸುವುದರ ಜೊತೆಗೆ ಅದೇ ಕಾಲದ ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಇತಿಹಾಸವನ್ನು ತಿಳಿಸುತ್ತವೆ.

 

ಜೈನ ಸಾಹಿತ್ಯ

 

ಭಾರತೀಯ ಸಾಹಿತ್ಯದ ಬೆಳವಣಿಗೆಗೆ ಜೈನ ಸಾಹಿತಿಗಳ ಕೊಡುಗೆ ಅಪಾರವಾದುದು. ಜೈನರು ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿ ಜನಸಾಮಾನ್ಯರ ಭಾಷೆಯಾದ ಪ್ರಾಕೃತದಲ್ಲಿ ಬೋಧಿಸಿದರು. ಮೊದಮೊದಲ ಜೈನ ಕೃತಿಗಳು 'ಅರ್ದಮಾಗಧಿ' ಭಾಷೆಯಲ್ಲಿ ರಚನೆಯಾದವು. ಕ್ರಿ.ಶ. 6ನೇ ಶತಮಾನದಲ್ಲಿ ಪ್ರಮುಖ ಶಿಕ್ಷಣ ಕೇಂದ್ರವಾದ ವಲ್ಲಭಿಯಲ್ಲಿ ಜೈನತತ್ವ, ಆಚಾರ ವಿಚಾರಗಳನ್ನೊಳಗೊಂಡ ಕೃತಿಗಳನ್ನು ಒಂದೆಡೆ ಸೇರಿಸಲಾಯಿತು. ಜೈನ ಸಾಹಿತ್ಯದಲ್ಲಿ ಬಳಸಲ್ಪಟ್ಟ ಪ್ರಾಕೃತ ಭಾಷೆ, ಸೌರ ಸೇನಿ ಭಾಷೆಯಾಗಿ ನಂತರ ಮರಾಠಿ ಭಾಷೆಯಾಗಿ ಬೆಳವಣಿಗೆಗೊಂಡಿತು. ಜೊತೆಗೆ ಈ

ಭಾಷೆಯಲ್ಲಿ ಅಪಾರ ಸಾಹಿತ್ಯವು ಬೆಳಕಿಗೆ ಬಂದಿತು. ಜೈನ ಧರ್ಮದ ಗ್ರಂಥಗಳನ್ನು ಅಂಗಗಳು ಮತ್ತು ಉಪಾಂಗಗಳೆಂದು ಕರೆಯುತ್ತಾರೆ. ಅಂತಹ 12 ಕೃತಿಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಆಚಾರಾಂಗ, ಧವಳ, ಜಯಧವಳ, ಈ ಎಲ್ಲ ಜೈನ ಸಾಹಿತ್ಯವೂ ಮೂಲಭೂತವಾಗಿ ಧಾರ್ಮಿಕ ನೆಲೆಗಟ್ಟಿನ ಮೇಲೆ ರಚಿತವಾಗಿರುವುದರಿಂದ ಐತಿಹಾಸಿಕವಾಗಿ ಇವು ಅಷ್ಟು ಉಪಯುಕ್ತ ಕೃತಿಗಳಲ್ಲ. ಅಲ್ಪ

ಸ್ವಲ್ಪ ಐತಿಹಾಸಿಕ ಅಂಶಗಳನ್ನೊಳಗೊಂಡ ಕೃತಿಯೆಂದರೆ ಹೇಮಚಂದ್ರನಿಂದ ರಚಿತವಾದ ಪರಿಶಿಷ್ಟ ಪರ್ವಾಣ.

 

ಮಹಾವೀರನು ಜನಸಾಮಾನ್ಯರ ಭಾಷೆಯಲ್ಲಿ ಬೋಧಿಸಲು ತನ್ನ ಶಿಷ್ಯರಿಗೆ ಆದೇಶಿಸಿದ್ದರಿಂದಾಗಿ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಸಾಹಿತ್ಯ ಪ್ರಕಟಗೊಂಡಿತು. ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಜೈನರೇ ಅಸ್ತಿಭಾರ ಹಾಕಿದರೆಂದು ಹೇಳಬಹುದು. ಆದಿಕವಿ ಪಂಪನು ಜೈನನಾಗಿದ್ದು ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣ ಎಂಬ ಗ್ರಂಥಗಳನ್ನು ರಚಿಸಿದ್ದಾನೆ. ಈ ಕೃತಿಗಳಲ್ಲಿ ಪಂಪನು ತನ್ನ ಆಶ್ರಯದಾತನಾದ ಚಾಲುಕ್ಯರ ಮಾಂಡಲಿಕ ಅರಿಕೇಸರಿ ಹಾಗೂ ಅವನ ಉತ್ತರಾಧಿಕಾರಿಗಳ ಬಗ್ಗೆ ಅನೇಕ ಐತಿಹಾಸಿಕ ಸಂಗತಿಗಳನ್ನು ನಿರೂಪಿಸಿದ್ದಾನೆ. ಹರ್ಷವರ್ಧನನ ವಿರುದ್ಧ ಪುಲಿಕೇಶಿಯ ದಿಗ್ವಿಜಯವನ್ನು ನಿರೂಪಿಸುವ ಐಹೊಳೆ ಶಾಸನವನ್ನು ಜೈನಕವಿ ರವಿಕೀರ್ತಿ ರಚಿಸಿದ್ದಾನೆ. ಗಂಗರ ಕಾಲದಲ್ಲಿ ಜೈನ ಧರ್ಮಕ್ಕೆ ದೊರೆತ ರಾಜಾಶ್ರಯದಿಂದಾಗಿ ಅನೇಕ ಉತ್ತಮ ಪ್ರಾಕೃತ ಮತ್ತು ಸಂಸ್ಕೃತ ಕೃತಿಗಳು ರಚಿತವಾಗಿದ್ದು . ಐತಿಹಾಸಿಕ ದೃಷ್ಟಿಯಿಂದ ಉಪಯುಕ್ತವಾಗಿವೆ. ಚಾವುಂಡರಾಯನು ತನ್ನ 'ಚಾವುಂಡರಾಯ ಪುರಾಣ'ದಲ್ಲಿ ತನ್ನ ಸಾಧನೆಗಳನ್ನು ತಿಳಿಸುವುದರ ಜೊತೆಗೆ ಆ ಕಾಲದ ರಾಜಕೀಯ ಪರಿಸ್ಥಿತಿ ಹಾಗೂ ಗಂಗರು ವಿವಿಧ ರಾಜಮನೆತನಗಳೊಂದಿಗೆ ಹೊಂದಿದ್ದ ಸಂಬಂಧದ ಬಗ್ಗೆ ಬೆಳಕು ಚೆಲ್ಲುತ್ತಾನೆ. ಭದ್ರಬಾಹುವಿನ 'ಜೈನ ಕಲ್ಪಸೂತ್ರ'ವು ಪಾರ್ಶ್ವನಾಥನ ಬಗ್ಗೆ ತಿಳಿಸುತ್ತದೆ. ಜೈನ ಕವಿಗಳಾದ ಪ್ರಭಾನಂದಿ, ವಿದ್ಯಾನಂದಿ, ಜಿನಸೇನ, ಗುಣಭದ್ರ, ಅಜಿತಸೇನಾಚಾರ್ಯ, ಹೇಮಚಂದ್ರ, ಹರಿಭದ್ರ, ಪೂಜ್ಯಪಾದ ಮುಂತಾದವರು ವ್ಯಾಕರಣ, ಶಬ್ದಕೋಶ, ಗಣಿತಶಾಸ್ತ್ರ, ಮೀಮಾಂಸ ಮುಂತಾದ ಲೌಕಿಕ ವಿಚಾರಗಳ ಬಗೆಗಿನ ಕೃತಿಗಳು ಇತಿಹಾಸದ ಅಧ್ಯಯನಕ್ಕೆ ಉಪಯುಕ್ತವಾಗಿವೆ.

 

ಐತಿಹಾಸಿಕ ಕಾವ್ಯಗಳು

 

ಪ್ರಾಚೀನ ಕಾಲದ ಐತಿಹಾಸಿಕ ವ್ಯಕ್ತಿಗಳ ಹಾಗೂ ಘಟನೆಗಳನ್ನಾಧರಿಸಿದ ಕೃತಿಗಳನ್ನು ಐತಿಹಾಸಿಕ ಕಾವ್ಯಗಳೆನ್ನುವರು. ಕಾಳಿದಾಸನ "ರಘುವಂಶ" ಮತ್ತು "ಮಾಳವಿಕಾಗ್ನಿಮಿತ್ರ" : ಕಾಳಿದಾಸನ ಮಹಾಕಾವ್ಯವಾದ ರಘುವಂಶವು ಗುಪ್ತರ ಸಾಮ್ರಾಟ ರಘುವಿನ ದಂಡಯಾತ್ರೆಯನ್ನು ವಿವರಿಸುತ್ತದೆ. ಈ ಕೃತಿಯ ನಾಯಕ ರಘುವು ಗುಪ್ತರ ಪ್ರಸಿದ್ಧ ಸಾಮ್ರಾಟರಾದ ಸಮುದ್ರಗುಪ್ತ ಅಥವಾ ಚಂದ್ರಗುಪ್ತ ವಿಕ್ರಮಾಧಿತ್ಯರಿರಬಹುದೆಂದು ವಿದ್ವಾಂಸರು ಗುರ್ತಿಸಿದ್ದಾರೆ. ಕಾಳಿದಾಸನ ಮತ್ತೊಂದು ಕೃತಿಯಾದ "ಮಾಳವಿಕಾಗ್ನಿಮಿತ್ರ" ಎಂಬ ನಾಟಕವು ವಿದೀಶಾ ಮತ್ತು ವಿಧರ್ಭ ರಾಜ್ಯಗಳ ನಡುವಿನ ಯುದ್ಧದ ಇತಿಹಾಸವನ್ನು ವಿವರಿಸುತ್ತದೆ. ಹಾಗೂ ಶಂಭೂ ದೊರೆಗಳಿಂದ ಗ್ರೀಕರು ಸಿಂಧೂ ನದಿ ದಂಡೆಯ ಮೇಲೆ ಹೇಗೆ ಸೋಲಪ್ಪಿದರು ಎಂಬುದನ್ನು ತಿಳಿಸುತ್ತದೆ.

 

ವಿಶಾಖದತ್ತನ "ಮುದ್ರರಾಕ್ಷಸ" :

ಈ ನಾಟಕದಲ್ಲಿ ಕೌಟಿಲ್ಯನೇ ನಾಯಕ, ಈ ನಾಟಕದಲ್ಲಿ ಆದಿಯಿಂದ ಅಂತ್ಯದವರೆಗೆ ರಾಜಕೀಯವೇ ಪ್ರಧಾನ ಅಂಶ. ನಂದರ ದೊರೆ ಧನನಂದನ ಹಾಗೂ ಚಂದ್ರಗುಪ್ತಮೌರ್ಯರ ನಡುವೆ ನಡೆದ ಯುದ್ಧವನ್ನು ಈ ಗ್ರಂಥವು ವಿವರಿಸುತ್ತದೆ. ಧನನಂದನನ ಪ್ರಧಾನಿ ರಾಕ್ಷಸನು ಕೌಟಿಲ್ಯನನ್ನು ದುರಾತ್ಮನೆಂದು ಆರಂಭಿಸಿ ಕೌಟಿಲ್ಯನ ಆದ್ಭುತವಾದ ರಾಜತಂತ್ರ ಕೌಶಲ್ಯಕ್ಕೆ ಬೆರಗಾದ ರಾಕ್ಷಸನು ಕೌಟಿಲ್ಯನನ್ನು ಮಹಾತ್ಮನೆಂದು ಕೊನೆಯಲ್ಲಿ ಒಪ್ಪಿಕೊಳ್ಳುವಂತಹ ಘಟನೆಗಳು ಒಳಗೊಂಡಿವೆ. ಆದ್ದರಿಂದ ವಿಶಾಖದತ್ತನನ್ನು ಭಾರತದ ಕಾರ್ನೆಲ್ ಎಂದು ಕರೆಯಲಾಗಿದೆ.

 

ಕಲ್ದಣನ "ರಾಜತರಂಗಿಣಿ" : 



ಈ ಗ್ರಂಥವನ್ನು ಭಾರತದ ಪ್ರಪ್ರಥಮ ಹಾಗೂ ಏಕೈಕ ವೈಜ್ಞಾನಿಕ ಐತಿಹಾಸಿಕ ಕೃತಿಯೆಂದು ಕರೆಯಲಾಗಿದೆ. ಕಾಶ್ಮೀರದ ಇತಿಹಾಸವನ್ನು ಅಧ್ಯಯನ ಮಾಡಲು ಯಾವುದೇ ಶಿಲಾಶಾಸನಗಳು ಲಭ್ಯವಿಲ್ಲ. ಕಾಶ್ಮೀರದ ಇತಿಹಾಸವನ್ನು ತಿಳಿಸುವ ಏಕೈಕ ಪ್ರಮುಖ ಕೃತಿಯೆಂದರೆ ಇದೊಂದೇ. ಇದಕ್ಕೆ ಪೂರಕವಾಗಿ ಸಮಕಾಲೀನ ನಾಣ್ಯಗಳು, ಭಗ್ನಾವಶೇಷಗಳು ಹಾಗೂ ಚೀನಿ ಮತ್ತು ಮುಸ್ಲಿಂ ಐತಿಹ್ಯಗಳು ಕಾಶ್ಮೀರದ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತವೆ. ರಾಜತರಂಗಣಿಯು 12ನೇ ಶತಮಾನದಲ್ಲಿ ರಚಿತವಾದರೂ ಹಿಂದಿನ ಅನೇಕ ಶತಮಾನಗಳ ಕಾಶ್ಮೀರದ ಇತಿಹಾಸವನ್ನು ಇದು ಒಳಗೊಂಡಿದೆ. ಈ ಗ್ರಂಥವು ಅಶೋಕನು ಕಳಿಂಗ ಯುದ್ಧಕ್ಕಿಂತ ಮೊದಲು ಶೈವ ಧರ್ಮೋಪಾಸಕನಾಗಿದ್ದನೆಂದೂ ನಂತರ ಬೌದ್ಧ ಧರ್ಮ ಸ್ವೀಕರಿಸಿದನೆಂದು ತಿಳಿಸುತ್ತದೆ. ಕಲ್ಪಣನು ಉತ್ತಮ ಸರ್ಕಾರದ ಬಗ್ಗೆ ತನ್ನದೇ ಆದ ವಿಚಾರಧಾರೆಯನ್ನು ಹೊಂದಿದ್ದನು. ಅವನ ಪ್ರಕಾರ "ಶಕ್ತಿಶಾಲಿ ರಾಜನು ತನ್ನ ಪ್ರಜೆಗಳನ್ನು ಕಟ್ಟುನಿಟ್ಟಾದ ಹತೋಟಿಯಲ್ಲಿಟ್ಟರಬೇಕು. ಆದರೆ ಪ್ರಜೆಗಳ ಬಗ್ಗೆ ಉದಾರತೆ ಹಾಗೂ ಅವರ ಆಶಯಗಳಿಗೆ ಸ್ಪಂದಿಸುವಂತಿರಬೇಕು" ಎಂದು ಅಭಿಪ್ರಾಯಪಟ್ಟಿದ್ದಾನೆ. ಆದ್ದರಿಂದಲೇ ಆರ್.ಸಿ. ಮಂಜುಂದಾರ್ ರವರು "ಪ್ರಾಚೀನ ಭಾರತದ ಸಾಹಿತ್ಯದಲ್ಲಿ ನಿಜವಾದ ಅರ್ಥದಲ್ಲಿ ಐತಿಹಾಸಿಕ ಕೃತಿ ಇದೊಂದೇ" ಎಂದು ಅಭಿಪ್ರಾಯಪಟ್ಟಿದ್ದಾರೆ.

 

ರಾಜತರಂಗಿಣಿಯ ಐತಿಹಾಸಿಕ ಮೌಲ್ಯ

 

ಕಲ್ಲಣನ ತಂದೆಯು ಓರ್ವ ಮಂತ್ರಿಯಾಗಿದ್ದರಿಂದ ಅವನಿಗೆ ರಾಷ್ಟ್ರದ ರಾಷ್ಟ್ರದ ಆಂತರಿಕ ವ್ಯವಹಾರಗಳು, ರಾಜ್ಯದ ಭೂಗೋಳ ಹಾಗೂ ಸ್ಥಳ ವಿಜ್ಞಾನಗಳು ಸರಿಯಾಗಿ ಗೊತ್ತಿದ್ದವು. ಅಲ್ಲದೇ ಕಲ್ದಣನಿಗೆ ಪ್ರಾಚೀನ ಅವಶೇಷಗಳ ಆಭ್ಯಾಸದ ಬಗ್ಗೆ ವಿಶೇಷವಾದ ಆಸಕ್ತಿಯಿತ್ತು. ಕಲ್ಪಣನು ತನ್ನ ಇತಿಹಾಸದ ಅಭ್ಯಾಸವನ್ನು ಬಿಲ್ವಣನ ವಿಕ್ರಮಾಂಕದೇವಚರಿತ ಹಾಗೂ ಬಾಣನ ಹರ್ಷಚರಿತ ಕೃತಿಗಳಿಂದ ಆರಂಭಿಸುತ್ತಾನೆ. ಅಲ್ಲದೇ ಅನೇಕ ಕಾಶ್ಮೀರಿ ವೃತ್ತಾಂತಗಳನ್ನು ಅಭ್ಯಸಿಸುತ್ತಾನೆ. ಈ ಕೃತಿಗಳಲ್ಲಿನ ನ್ಯೂನ್ಯತೆಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾನೆ. ಕಲ್ದಣನು ತನ್ನ ಕೃತಿಯ ರಚನೆಗೆ ಆಧಾರವಾಗಿ ಆನೇಕ ಪ್ರಾಚೀನ ಅವಶೇಷಗಳನ್ನು ಶೋಧಿಸಿ ಆವುಗಳನ್ನು ವೈಜ್ಞಾನಿಕವಾಗಿ ಅಭ್ಯಸಿಸುತ್ತಾನೆ.

 

ಕಲ್ದಣನ ಈ ಪ್ರಾಚೀನ ಅವಶೇಷಗಳ ಬಗೆಗಿನ ವರ್ಣನೆಯು ಆಧುನಿಕ ಪರಿಶೋಧನೆ ಮತ್ತು ಸಂಶೋಧನೆಗಳಿಗೆ ಮಾದರಿಯಾಗಿದೆ. ಕಾಶ್ಮೀರದ ಇತಿಹಾಸದ ಬಗೆಗಿನ ತನಗೆ ಲಭ್ಯವಿದ್ದ ಎಲ್ಲಾ ಶಿಲಾಶಾಸನಗಳನ್ನು ಕಲ್ಪಣನು ಗುರುತಿಸಿ ಓದಿ ತನ್ನ ಕೃತಿ ರಚನೆಗೆ ಉಪಯೋಗಿಸಿಕೊಂಡಿದ್ದಾನೆ. ಒಟ್ಟಾರೆ ಮೊದಲ ಬಾರಿಗೆ ಭಾರತೀಯ ಇತಿಹಾಸಜ್ಜನೊಬ್ಬನು ಸಾಹಿತ್ಯ, ಶಿಲಾಶಾಸನ, ನಾಣ್ಯಶಾಸ್ತ್ರ ಹಾಗೂ ಪ್ರಾಚೀನ ಅವಶೇಷಗಳನ್ನು ಆಧಾರಗಳನ್ನಾಗಿಟ್ಟುಕೊಂಡು ರಾಜತರಂಗಿಣಿಯೆಂಬ ಕೃತಿಯನ್ನು ರಚಿಸಿದ್ದಾನೆ.

 

ಕಲ್ದಣನು ಈ ಕೃತಿಯನ್ನು ಕ್ರಿ. ಶ 1150ರಲ್ಲಿ ಪೂರ್ಣಗೊಳಿಸಿದನು. ಈ ಕೃತಿಯು ಕಾಶ್ಮೀರದಲ್ಲಿ ಆಳಿದ ಹಿಂದಿನ ಅನೇಕ ವಂಶಾವಳಿಗಳ ವೃತ್ತಾಂತವನ್ನು ಕೊಡುತ್ತದೆ. ಇವನ ಈ ಕೃತಿಯ ನ್ಯೂನ್ಯತೆಯೆಂದರೆ ಕೃತಿಯ ಪ್ರಾರಂಭಿಕ ಹಂತದಲ್ಲಿ ಅನೇಕ ಕಟ್ಟುಕಥೆಗಳನ್ನು, ಉತ್ತೇಕ್ಷೆಗಳನ್ನು ಯಾವುದೇ ಟೀಕೆಯಿಲ್ಲದೆ ಕೊಟ್ಟಿರುವುದು. ಉದಾಹರಣೆಗೆ *ರಣಾಧಿತ್ಯನೆಂಬುವವನು 300 ವರ್ಷಗಳ ಕಾಲ ಆಳಿದನೆಂಬುದಾಗಿದೆ. ಕಾಶ್ಮೀರದ ಪ್ರಾಚೀನ ವೃತ್ತಾಂತಗಳಲ್ಲಿ ಹೇಳಿದ ಕಟ್ಟುಕತೆಗಳನ್ನು ಸುಲಭವಾಗಿ ನಂಬಿಬಿಟ್ಟಿದ್ದಾನೆ ಎಂಬ ಆಪಾದನೆಯು ರಾಜತರಂಗಿಣಿಯನ್ನು ಇಂಗ್ಲಿಷಿಗೆ ಪ್ರಥಮವಾಗಿ ಅನುವಾದಿಸಿದ ಸರ್.ಎ. ಸ್ಟೀನ್‌ರವರದಾಗಿದೆ. ಆದರೆ ಕಲ್ದಣನು ತನ್ನ ಸಮಕಾಲೀನ ಇತಿಹಾಸವನ್ನು ರಚಿಸುವಾಗ ತನ್ನದೆ ಜ್ಞಾನದ ಮೇಲೆ ಆಧರಿತನಾಗಿದ್ದಾನೆ. ಬರವಣೆಗೆಯಲ್ಲಿ ನಿಷ್ಪಕ್ಷಪಾತತನವನ್ನು, ಸ್ವತಂತ್ರ ವಿಚಾರವಂತಿಕೆಯನ್ನು ಪ್ರತಿನಿಧಿಸಲು ಕಲ್ಪಣನು ತನ್ನೊಂದಿಗೆ ಸಂಪರ್ಕಹೊಂದಿದ್ದ ಅನೇಕ ಜನರಿಂದ ವಿವರಗಳನ್ನು ಸಂಗ್ರಹಿಸಿ ಕೊಟ್ಟಿದ್ದಾನೆ.

ಕಲ್ದಣನು ತನ್ನ ರಾಜತರಂಗಿಣಿಯಲ್ಲಿ ಇತಿಹಾಸ ನಿರ್ಮಾಪಕರೊಂದಿಗೆ ಅವರ ಅನುಯಾಯಿಗಳನ್ನು ಪರಿಗಣಿಸಿರುವುದು ಅವನ ವೈಶಿಷ್ಟವೆಂದು ಹೇಳಬಹುದು. ಕಲ್ದಣನು ತನ್ನ ಕೃತಿಯಲ್ಲಿ ಕರಾರುವಕ್ಕಾದ ಕಾಲಗಣನೆಯನ್ನು ನೀಡಿದ್ದಾನೆ. ಆದ್ದರಿಂದ ಸರ್ವೇ ಸಾಮಾನ್ಯವಾಗಿ ಅವನು ರಾಜತರಂಗಿಣಿಯಲ್ಲಿ ಕೊಡುವ ವಿಷಯಗಳು ಅತ್ಯಂತ ಸಮರ್ಪಕವಾಗಿಯೇ ಇದ್ದು ಅವುಗಳನ್ನು ಪುನಃ ಪರೀಕ್ಷಿಸುವಂತಿಲ್ಲ. ಆದರೂ ಕೆಲವು ವಿಷಯಗಳಲ್ಲಿ ಇಂದಿನ ಆಧುನಿಕ ಇತಿಹಾಸಕಾರನ ಮಟ್ಟಕ್ಕೆ ಇವನು ತಲುಪದಿದ್ದರೂ ಇವನು ಕೇವಲ ವೃತ್ತಾಂತಕಾರ ಅಥವಾ ಕಾಲಗಣನಾ ತಜ್ಞನಾಗಿರದೇ ಇತಿಹಾಸಕಾರನೇ ಆಗಿದ್ದನೆಂದು ಹೇಳಬಹುದು.

 

ಬಾಣನ "ಹರ್ಷಚರಿತೆ"

 

ಹರ್ಷಚರಿತದಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯದಲ್ಲಿ ಲೇಖಕನ ಕುಟುಂಬದ ಬಗೆಗೆ ವಿವರಗಳು ಹಾಗೂ ಪೀಠಿಕೆಯಲ್ಲಿರುವ ಶ್ಲೋಕಗಳು ಬಾಣನಿಗಿಂತ ಹಿಂದಿದ್ದ ಅನೇಕ ಲೇಖಕರು ಹಾಗೂ ಅವರ ಕೃತಿಗಳ ಪಟ್ಟಿಯನ್ನೊಳಗೊಂಡಿದೆ. ಉದಾಹರಣೆಗೆ ವಾಸವದತ್ತಾ, ಪ್ರವರಸೇನ, ಭಾಸ, ಕಾಳಿದಾಸ ಹಾಗೂ ಬೃಹದ್ರಥಾ. ಇದು ಸಾಹಿತ್ತಿಕ ಕಾಲಗಣನೆಯ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾದುದು. ಎರಡನೆಯ ಅಧ್ಯಾಯದಲ್ಲಿ ಥಾಣೇಶ್ವರದ ವರ್ಣನೆಯನ್ನೊಳಗೊಂಡಿದೆ. ಮೂರನೇ ಅಧ್ಯಾಯವು ಪುಷ್ಯಭೂತಿಯಿಂದ ಪ್ರಾರಂಭಿಸಿ ಹರ್ಷನವರೆಗಿನ ಪೂರ್ವಿಕರೆಲ್ಲರನ್ನು ಗುರುತಿಸಿ ಅವರ ಚರಿತ್ರೆಯ ಪಟ್ಟಿಯನ್ನೊಳಗೊಂಡಿದೆ. ನಾಲ್ಕನೇ ಅಧ್ಯಾಯದಿಂದ ಆರನೇ ಅಧ್ಯಾಯದವರೆಗೆ ರಾಜವರ್ಧನ, ಹರ್ಷ ಹಾಗೂ ರಾಜ್ಯಶ್ರೀ ಇವರುಗಳ ಜನನ, ರಾಜವರ್ಧನನ ಹೂಣರ ವಿರುದ್ಧದ ಯುದ್ಧ, ಗೃಹವರ್ಮನ್ ಸಾವಿನ ನಂತರ ಮಾಳವದ ಅರಸನಿಂದ ರಾಜ್ಯಶ್ರೀಯ ಬಂಧನ. ಮಾಳವದ ಮೇಲೆ ರಾಜವರ್ಧನನಿಂದ ಧಾಳಿ, ಸುಲಭ ಜಯ ಹಾಗೂ ಗೌಡದೇಶದ ಶಶಾಂಕನಿಂದ ರಾಜವರ್ಧನನ ಕೊಲೆ, ಶಶಾಂಕನಂತಹ ದೊರೆಗಳನ್ನು ಪೃಥ್ವಿಯಿಂದಲೇ ತೊಡೆದುಹಾಕುವ ಹರ್ಷನ ಸಂಕಲ್ಪ, ರಾಜವರ್ಧನನ ಸಾವಿನಿಂದ ವಿಕಲ್ಪಗೊಂಡ ಹರ್ಷನಿಗೆ ಸೇನಾನಿಗಳಿಂದ ಬೃಹದ್ರಥ (ಮೌರ್ಯ), ಕಾಕವರ್ಣ (ಶಿಶುನಾಗ) ಮುಂತಾದ ಅರಸರ ಮರಣದ ಘಟನೆಗಳನ್ನು ವಿವರಿಸಿ ಸಮಾಧಾನಗೊಳಿಸುತ್ತಾರೆ. ಏಳನೆಯ ಅಧ್ಯಾಯವು ಹರ್ಷನ ಸೈನಿಕ ಚಟುವಟಿಕೆಗಳನ್ನು, ರಾಜ್ಯಶ್ರೀಯನ್ನು ಹುಡುಕುತ್ತಾ ಹೊರಟ ಹರ್ಷನ ಯಾತ್ರೆಯನ್ನು ಕುರಿತಾಗಿದೆ. ಕೊನೆಯ ಅಧ್ಯಾಯವು ದಿವಾಕರ ಮಿತ್ರ ಎಂಬ ಬೌದ್ಧ ಮುಖಂಡನ ನೇತೃತ್ವದಲ್ಲಿ ವಿಂಧ್ಯಪರ್ವತಗಳಲ್ಲಿ ನಡೆಯುತ್ತಿದ್ದ ಧಾರ್ಮಿಕ ಚಟುವಟಿಕೆಗಳು, ಅಂತ್ಯದಲ್ಲಿ ಇನ್ನೇನು ರಾಜ್ಯಶ್ರೀಯು ಅಗ್ನಿ ಪ್ರವೇಶಕ್ಕೆ ಸಿದ್ಧಳಾಗಿರುವಾಗ ಹರ್ಷನು ಅವಳನ್ನು ಕಾಪಾಡಿದ ವರ್ಣನೆಯಿದೆ. ಹರ್ಷವರ್ಧನನು ಕೊನೆಯಲ್ಲಿ ತನ್ನ ಭಾವ ಹಾಗೂ ಸೋದರರ ಕೊಲೆಯ ಸೇಡನ್ನು ತೀರಿಸಿಕೊಂಡ ನಂತರ ಬೌದ್ಧ ಸನ್ಯಾಸಿಯಾಗುವುದಾಗಿ ಸಂಕಲ್ಪಿಸಿ ರಾಜ್ಯಶ್ರೀ ಹಾಗೂ ದಿವಾಕರ ಮಿತ್ರನೊಂದಿಗೆ ಗಂಗಾನದಿ ತೀರದಲ್ಲಿದ್ದ ತನ್ನ ಡೇರೆಗೆ ವಾಪಾಸಾಗುತ್ತಾನೆ.

 

ಹರ್ಷಚರಿತದ ಐತಿಹಾಸಿಕ ಮೌಲ್ಯ
 

ಹರ್ಷಚರಿತವು ಹರ್ಷನ ಜೀವನ ಚರಿತ್ರೆಯ ಅಪೂರ್ಣ ಇತಿಹಾಸ ಕೃತಿಯಾಗಿದೆ. ಬಾಣನ ಹರ್ಷಚರಿತೆಯನ್ನು ಕಟ್ಟುಕತೆಯೆಂದು ಇತಿಹಾಸದ ಮೂಲಾಧಾರವಾಗಲು ಯೋಗ್ಯವಲ್ಲವೆಂದು ತಿರಸ್ಕರಿಸಲಾಗಿತ್ತು. ಆದರೆ ಇಂದು ಅದರ ಐತಿಹಾಸಿಕತೆಯನ್ನು ಗುರುತಿಸಿ ಯೋಗ್ಯಕೃತಿಯೆಂದು ಅಂಗೀಕರಿಸಲಾಗಿದೆ. ಬಾಣನು ಹರ್ಷನನ್ನು ಆತ್ಮೀಯವಾಗಿ ಬಲ್ಲವನಾಗಿದ್ದು ಆತನನ್ನು ಪ್ರಶಂಸಿಸಿ ಕೃತಿ ರಚಿಸಿದ್ದಾನೆ.

ಬಾಣನು ಸಮಕಾಲೀನ ಜನಜೀವನದ ಬಗ್ಗೆ ವರ್ಣನೆ ಮಾಡುವುದರಿಂದ ಸ್ಪಷ್ಟ ಸಾಮಾಜಿಕ ಜೀವನದ ಪರಿಚಯ ದೊರೆಯುತ್ತದೆ. ಇವನು ಸಮಕಾಲೀನವಾದ ವಿಷಯವನ್ನಾಯ್ದುಕೊಂಡು ಕೃತಿ ರಚನೆ ಮಾಡುವಾಗ ಆ ಕಾಲಕ್ಕೆ ಅನುಗುಣವಾದ ಬರವಣಿಗೆ ಶೈಲಿಯಲ್ಲಿ ತನ್ನ ವಿಷಯಗಳನ್ನು ಬಳಸಿಕೊಂಡಿದ್ದಾನೆ. ಬಾಣನು ಕಟ್ಟುಕತೆಗಳ ಲೇಖಕರನ್ನು ಇಷ್ಟಪಡುವುದಿಲ್ಲ, ಆದರೆ ತನ್ನ ಹರ್ಷ ಚರಿತವನ್ನು ಕಟ್ಟುಕತೆಯ ಶೈಲಿಯಲ್ಲೇ ರಚಿಸಿದ್ದಾನೆ. ಇವನು ವ್ಯಕ್ತಿಯ ಮುಖಸ್ತುತಿ ಹಾಗೂ ಘಟನೆಗಳ ಬಗ್ಗೆ ಉತ್ತೇಕ್ಷೆ ಮಾಡಿದರೂ ಅಸತ್ಯವನ್ನು ಹೇಳುವುದಿಲ್ಲ ಹಾಗೂ ಸತ್ಯದಿಂದ ಬಹುದೂರ ಹೋಗಿ ತನ್ನ ಕೃತಿ ರಚನೆಮಾಡಿಲ್ಲ. ಬಾಣನು ತನ್ನ ಹರ್ಷಚರಿತದ ರಚನೆಗೆ ಬಳಸಲ್ಪಟ್ಟ ಮೂಲಾಧಾರ ಹಾಗೂ ಪ್ರಧಾನ ವ್ಯಾಖ್ಯಾನಗಳು ಐತಿಹಾಸಿಕವೆ ಆಗಿವೆ. ಚರಿತ್ರೆ ಮತ್ತು ದಂತಕಥೆಯ ಮಿಶ್ರಣದ ವಿಷಯಗಳನ್ನು ಕಟ್ಟುಕತೆಯ ಶೈಲಿಯಲ್ಲಿ ರಚಿಸಿರುವುದೇ ಬಾಣನ ಹರ್ಷಚರಿತೆಯ ಬಹು ದೊಡ್ಡ ನ್ಯೂನ್ಯತೆಯಾಗಿದೆ. ಆದರೆ ಬಾಣನು ಧಾರ್ಮಿಕ ಕೇಂದ್ರಗಳನ್ನು ವಿವರಿಸುವಾಗ ಅವು ಬ್ರಾಹ್ಮಣರವೇ ಅಥವಾ ಬೌದ್ಧರದೇ ಎಂಬ ಪೂರ್ವಾಗ್ರಹಕ್ಕೆ ಒಳಗಾಗದೆ ಒಂದೇ ಬಗೆಯಾಗಿ ವರ್ಣಿಸಿರುವುದು ಅವನೊಬ್ಬ ಪೂರ್ವಾಗ್ರಹ ಪೀಡಿತ ಇತಿಹಾಸಕಾರನಾಗಿರದೆ ಸತ್ಯಸಂಗತಿಗಳನ್ನಾಧರಿಸಿದ ಇತಿಹಾಸಕಾರನಾಗಿದ್ದನೆಂಬುದನ್ನು ರುಜುವಾತುಪಡಿಸುತ್ತದೆ. ಬಾಣನ ಹರ್ಷಚರಿತವು ಮೇಲ್ಕಂಡ ಅಂಶಗಳ ಆಧಾರದ ಮೇಲೆ ಅತ್ಯಂತ ಮಹತ್ವಪೂರ್ಣ ಇತಿಹಾಸ ಕೃತಿಯೆಂದು ಸರ್ವವಿಧಿತವಾಗಿದೆ.

 

ಇದೇ ರೀತಿ ಬಂಗಾಳದ ರಾಜನಾದ ರಾಮಪಾಲನ ಆತ್ಮಕಥನವಾದ "ರಾಮಚರಿತ"ವು ಉತ್ತಮ ಐತಿಹಾಸಿಕ ಅಂಶಗಳನ್ನು ನೀಡುತ್ತದೆ. ಚಾಂದ್‌ಬರ್ದಾಯಿಯ 'ಪೃಥ್ವಿರಾಜ್ ರಾಸೊ' ರಜಪೂತರ ಪ್ರಸಿದ್ದ ದೊರೆ ಪೃಥ್ವಿರಾಜ ಚೌಹಾಣನ ಬಗ್ಗೆ ವಿಪುಲ ಮಾಹಿತಿ ನೀಡುತ್ತದೆ. ಬಿಲ್ಡಣನ 'ವಿಕ್ರಮಾಂಕದೇವ ಚರಿತ'ವು ಚಾಲುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಮೇಲೆ ಬೆಳಕು ಚೆಲ್ಲುತ್ತದೆ. ಅಶ್ವಘೋಷನ 'ಬುದ್ಧ ಚರಿತ'ವು ಬುದ್ಧನ ಜೀವನ ಹಾಗೂ ಬೋಧನೆಗಳ ಬಗ್ಗೆ ತಿಳಿಸುತ್ತದೆ. ಗುಜರಾತಿನ ಇತಿಹಾಸವನ್ನು 'ರಸಮಾಲ' ಎಂಬ ಕೃತಿಯು ನೀಡುತ್ತದೆ. ಜನ್ನನ 'ಯಶೋಧರ ಚರಿತೆ', ಜಯಸಿಂಹನ 'ಕುಮಾರಪಾಲ ಚರಿತೆ', ಮಾಯರ್‌ಜಂಗ್‌ನ 'ಚಿಂತಾಮಣಿ' ಎಂಬ ನಾಟಕ, ರಾಜಶೇಖರನ 'ಪ್ರಬಂಧಕೋಶ', ಮೇರುತುಂಗನ 'ಪ್ರಬಂಧ ಚಿಂತಾಮಣಿ' ಇವುಗಳು ಅರ್ಧ-ಐತಿಹಾಸಿಕ ಕೃತಿಗಳಾಗಿ ಪ್ರಾಚೀನ ಭಾರತದ ಇತಿಹಾಸ ರಚನೆಗೆ ಉಪಯೋಗವಾಗುತ್ತವೆ.

 

ವೈಜ್ಞಾನಿಕ ಸಾಹಿತ್ಯ

 

ಪ್ರಾಚೀನ ಭಾರತೀಯರಿಗೆ ವೈಜ್ಞಾನಿಕ ಜ್ಞಾನದ ಅರಿವಿದ್ದು ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿರುವರು. ಪ್ರಮುಖವಾದ ವೈಜ್ಞಾನಿಕ ಕೃತಿಗಳೆಂದರೆ, ಚರಕನ "ಚರಕ ಸಂಹಿತ". ಇದು ಆಯುರ್ವೇದ ವೈದ್ಯಕೀಯ ಶಾಸ್ತ್ರದ ಬಗ್ಗೆ ಉತ್ತಮ ಮಾಹಿತಿ ನೀಡುತ್ತದೆ. ಶುತೃತನ "ಶುಶೃತ ಸಂಹಿತ"ದಲ್ಲಿ ಖನಿಜ, ಗಿಡಮೂಲಿಕೆ ಮುಂತಾದ ಔಷಧಿಗಳನ್ನು ಕುರಿತ ಮಾಹಿತಿ ದೊರೆಯುತ್ತದೆ. ಚರಕ ಹಾಗೂ ಶುಶೃತರು ವಿಶ್ವದ ವೈದ್ಯಶಾಸ್ತ್ರದಲ್ಲಿ ಹೆಸರಾಂತ ವ್ಯಕ್ತಿಗಳು. ಇವರು ರೋಗ ನಿವಾರಣೆಗೆ ಅವಶ್ಯವಾದ ಶಸ್ತ್ರಚಿಕಿತ್ಸೆಯ ಉಪಯೋಗವನ್ನರಿತಿದ್ದು ಶಸ್ತ್ರಚಿಕಿತ್ಸೆಯ ಸುಮಾರು 127 ಬಗೆಯ ಶಸ್ತ್ರ ಸಲಕರಣೆಗಳನ್ನು ತಮ್ಮ ಕೃತಿಗಳಲ್ಲಿ ವಿವರಿಸಿದ್ದಾರೆ. ಗುಪ್ತರ ಕಾಲದ ಪ್ರಸಿದ್ಧ ವಿಜ್ಞಾನಿಯಾದ ವರಾಹಮಿಹಿರನು 'ಬೃಹಜ್ಜಾತಕ' ಮತ್ತು 'ಪಂಚ ಸಿದ್ಧಾಂತಿಕ' ಎಂಬ ಕೃತಿಗಳನ್ನು ರಚಿಸಿರುವನು. ಈ ಗ್ರಂಥಗಳು ವಿಶ್ವಕೋಶಗಳೆಂದೇ ಪ್ರಸಿದ್ಧವಾಗಿವೆ. ಕಾರಣ ಇವು ಖಗೋಳಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಗೋಳ ಶಾಸ್ತ್ರ ಹಾಗೂ ವಿವಾಹವನ್ನೂ ಕುರಿತು ಮಾಹಿತಿಗಳನ್ನೊಳಗೊಂಡಿವೆ.

 

ಆರ್ಯಭಟನು ಗುಪ್ತರ ಕಾಲದ ಪ್ರಸಿದ್ದ ಖಗೋಳ ಶಾಸ್ತ್ರಜ್ಞ ಮತ್ತು ಗಣಿತ ಶಾಸ್ತ್ರಜ್ಞನಾಗಿದ್ದನು. ಈತನ ಪ್ರಸಿದ್ಧ ಕೃತಿ 'ಆರ್ಯಭಟೀಯಂ' ಖಗೋಳಶಾಸ್ತ್ರ, ಬೀಜಗಣಿತ, ರೇಖಾಗಣಿತ ಹಾಗೂ ಅಂಕಗಣಿತದ ಬಗ್ಗೆ ಮಾಹಿತಿ ನೀಡುತ್ತದೆ. ಆರ್ಯಭಟನು ಭೂಮಿಯು ಗೋಳಾಕಾರವಾಗಿದ್ದು ತನ್ನ ಅಕ್ಷದಲ್ಲಿಯೇ ಸುತ್ತುತ್ತಿರುತ್ತದೆಂದು ಪ್ರತಿಪಾದಿಸಿದನು. ಹಾಗೆಯೇ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸಿದ್ದಾಂತಗಳನ್ನು ಮಂಡಿಸಿದನು. ಸೂರ್ಯವರ್ಷದ (ಸೌರಮಾನ) ಅವಧಿಯನ್ನು 365.3586805 ದಿನಗಳೆಂದು ಕರಾರುವಾಕ್ಕಾಗಿ ಲೆಕ್ಕ ಮಾಡಿದ್ದನು. ಬ್ರಹ್ಮಗುಪ್ತನು ಖ್ಯಾತ ಗಣಿತ ಶಾಸ್ತ್ರಜ್ಞನಾಗಿದ್ದನು. ಇವನು "ಸೂರ್ಯಸಿದ್ಧಾಂತ"ವೆಂಬ ಖಗೋಳವಿಜ್ಞಾನ ಕುರಿತ ಕೃತಿಯನ್ನು ರಚಿಸಿದ್ದರೂ ಬ್ರಹ್ಮಗುಪ್ತನನ್ನು ಖಗೋಳ ವಿಜ್ಞಾನಿಯೆಂದು ಒಪ್ಪುವುದಕ್ಕಿಂತಲೂ ಗಣಿತಶಾಸ್ತ್ರಜ್ಞನೆಂದೇ ಒಪ್ಪಬೇಕಾಗುತ್ತದೆ. ಏಕೆಂದರೆ ಇವನು ಸನಾತನ ಸಂಪ್ರದಾಯಸ್ಥನಾಗಿದ್ದು ಭೂಮಿಯು ಪ್ರತಿನಿತ್ಯವು ತನ್ನ ಅಕ್ಷದ ಮೇಲೆ ಸುತ್ತುತ್ತಿರುತ್ತದೆಂಬ ಆರ್ಯಭಟನ ವಾದವನ್ನು ಒಪ್ಪದೆ ಟೀಕಿಸಿದ್ದಾನೆ. ಆದರೆ ಇವನು ಖ್ಯಾತ ಗಣಿತಶಾಸ್ತ್ರಜ್ಞನಾಗಿ ವಿಶ್ವಕ್ಕೆ ಗಣಿತದಲ್ಲಿ ಶೂನ್ಯ ಅಥವಾ ಸೊನ್ನೆಯ ಪ್ರಾಮುಖ್ಯತೆ ಹಾಗೂ ದಶಮಾನ ಪದ್ಧತಿಯನ್ನು ಕಾಣಿಕೆಯಾಗಿ ನೀಡಿದ್ದಾನೆ. ಕಲ್ಯಾಣಿ ಚಾಲುಕ್ಯರ 6ನೇ ವಿಕ್ರಮಾಧಿತ್ಯನ ಆಸ್ಥಾನದಲ್ಲಿದ್ದ ಕೀರ್ತಿವರ್ಮನು 'ಗೋವೈದ್ಯ' ಎಂಬ ಪಶುವೈದ್ಯಕೀಯದ ಬಗ್ಗೆ ಕೃತಿ ರಚಿಸಿದ್ದಾನೆ. ಉಗ್ರಾಧಿತ್ಯ. ಪಂಡಿತನ 'ಕಲ್ಯಾಣಕಾರಕ' ಎಂಬ ಗ್ರಂಥವು ರಾಷ್ಟ್ರಕೂಟರ ಕಾಲದ ವೈದ್ಯಕೀಯ ರಂಗದ ಬಗ್ಗೆ ಮಾಹಿತಿ ನೀಡುತ್ತದೆ.

ಗಂಗರ ದೊರೆಗಳಾದ ಶಿವಮಾರ ರಚಿಸಿದ 'ಗಜಾಷ್ಟಕ' ಹಾಗೂ ದುರ್ವಿನೀತನ 'ಗಜಶಾಸ್ತ್ರ' ಕೃತಿಗಳು ಚತುರ್ಬಲದ ಮುಖ್ಯ ಬಲವಾಗಿದ್ದ ಗಜಗಳ ಬಗ್ಗೆ, ಸಾಲಿಹೋತ್ರನ 'ಅಶ್ವಶಾಸ್ತ್ರವು' ಅಶ್ವಗಳ ಬಗ್ಗೆ ಪ್ರಾಣಿ ವೈದ್ಯಶಾಸ್ತ್ರವನ್ನೊಳಗೊಂಡಿವೆ.

ಎರಡನೇ ನಾಗಾರ್ಜುನನ 'ರಸವೈದ್ಯ', ವಾಗ್ಟಟನ 'ಅಷ್ಟಾಂಗ ಸಂಗ್ರಹ' ಮತ್ತು 'ಅಷ್ಟಾಂಗ ಹೃದಯ' ಎಂಬ ಕೃತಿಗಳಲ್ಲಿ ಆಯುರ್ವೇದ ಪದ್ಧತಿಯ ವೈದ್ಯಕೀಯ ಮತ್ತು ಶಸ್ತ್ರ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿಗೊಳಿಸಿದ ವಿವರಣೆಯಿದೆ. ಎರಡನೇ ನಾಗಾರ್ಜುನನನ್ನು 'ಭಾರತದ ರಸಾಯನ ಶಾಸ್ತ್ರದ ಪಿತಾಮಹ'ನೆಂದು ಪರಿಗಣಿಸಲಾಗಿದೆ. ಲೋಹಶಾಸ್ತ್ರವನ್ನು ಕುರಿತ ಕೃತಿಗಳು ನಮಗೆ ಲಭ್ಯವಿಲ್ಲದಿದ್ದರೂ ದೆಹಲಿ ಬಳಿಯ ಮೆಹರೌಲಿ ಎಂಬ ಹಳ್ಳಿಯ ಬಳಿ ದೊರೆತಿರುವ ಎರಡನೇ ಚಂದ್ರಗುಪ್ತನದೆಂದು ಗುರುತಿಸಿರುವ ಶಾಸನವನ್ನೊಳಗೊಂಡ ಕಬ್ಬಿಣದ ಸ್ತಂಭವು ಪ್ರಾಚೀನ ಭಾರತೀಯರ ಲೋಹ ವಿಜ್ಞಾನದ ಬಗೆಗಿನ ಪರಿಪಕ್ವತೆಯನ್ನು ಸೂಚಿಸುತ್ತದೆ. 23 ಅಡಿ 8 ಅಂಗುಲ ಎತ್ತರ ಹಾಗು 6000 ಕಿ. ಗ್ರಾಂ ತೂಕವನ್ನೊಳಗೊಂಡ ಈ ಕಬ್ಬಿಣದ ಕಂಬವು ಇಂದಿಗೂ ತುಕ್ಕು ಹಿಡಿಯದೆ ಅಥವಾ ನಾಶವಾಗದೆ ನಿಂತಿದೆ.

 

ವಿದೇಶಿ ಬರವಣಿಗೆಗಳು

 

ಇಂದು ವಿದೇಶದಲ್ಲಿರುವ ಹಿಂದೆ ಭಾರತದ ಪ್ರಭಾವಕ್ಕೊಳಗಾಗಿದ್ದ ಅನೇಕ ಪ್ರದೇಶಗಳಲ್ಲಿ ಭಾರತದ ಬಗ್ಗೆ ಮಾಹಿತಿ ನೀಡುವ ಶಾಸನಗಳು ದೊರಕಿವೆ. ಏಷ್ಯಾ ಮೈನರ್‌ನಲ್ಲಿ ದೊರಕಿದ ಬೊಗಾಜ್ ಕಾಯ್ ಶಾಸನವು ಅನೇಕ ಆರ್ಯ ದೇವತೆಗಳ ಹೆಸರುಗಳನ್ನೊಳಗೊಂಡಿದ್ದು ಆರ್ಯರು ಮಧ್ಯ ಏಷ್ಯಾದಿಂದ ಭಾರತದೆಡೆಗೆ ವಲಸೆ ಬಂದ ಬಗ್ಗೆ ಹಾಗೂ ಅವರ ಚಲನ ವಲನಗಳ ಬಗ್ಗೆ ಮಾಹಿತಿ ನೀಡುತ್ತದೆ. ಬೆಹಸ್ತಾನ್, ಪರ್ಸೆಪೋಲಿಸ್ ಹಾಗೂ ನಕ್ಸ್- ಐ-ರುಸ್ತುಂಗಳಲ್ಲಿನ ಶಾಸನಗಳು ಭಾರತ ಮತ್ತು ಪರ್ಷಿಯಾ (ಇರಾನ್)ಗಳ ನಡುವಿನ ರಾಜಕೀಯ ಸಂಬಂಧದ ಬಗ್ಗೆ ತಿಳಿಸುತ್ತವೆ. ಆನ್ನೇಯ ಏಷ್ಯಾದಲ್ಲಿ ದೊರೆತ ಅನೇಕ ಸಂಸ್ಕೃತ ಶಾಸನಗಳು ಅಲ್ಲಿನ ಭಾರತೀಯ ಸಂಸ್ಕೃತಿಯ ಪ್ರಭಾವವನ್ನು ತಿಳಿಸುತ್ತವೆ. ಪರ್ಷಿಯಾದ ಅರಸ ಡೇರಿಯಸ್ಸನ ಶಾಸನವು ವಾಯುವ್ಯ ಭಾರತವು ಪರ್ಷಿಯನ್ನರ ಆಳ್ವಿಕೆಯಲ್ಲಿದ್ದ ಸಂದರ್ಭದ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತದೆ.

 

ಭಾರತವು ತನ್ನ ಭೂಸಂಪತ್ತು, ಆರ್ಥಿಕ ಸಂಪತ್ತು ಹಾಗೂ ಬೌದ್ಧಿಕ ಸಂಪತ್ತನ್ನು ಹೇರಳವಾಗಿ ಹೊಂದಿದ್ದರಿಂದ ಆನೇಕ ದಿಗ್ವಿಜಯಿಗಳನ್ನು, ವಾಣಿಜ್ಯೋದ್ಯಮಿಗಳನ್ನು, ತತ್ವಜ್ಞಾನಿಗಳನ್ನು ಹಾಗೂ ಭಾರತದ ಸೌಂದರ್ಯವನ್ನು ಸವಿಯಲು ಬಂದ ಪ್ರವಾಸಿಗರನ್ನು ಆಕರ್ಷಿಸಿತು. ಭಾರತಕ್ಕೆ ಅನೇಕ ವಿದೇಶಿ ಪ್ರವಾಸಿಗರು ಬಂದಿದ್ದರು. ಅವರೆಲ್ಲರೂ ತಮ್ಮದೇ ಆದ ದಾಖಲೆಗಳನ್ನು, ಬರಹಗಳನ್ನು, ಅಭಿಪ್ರಾಯಗಳನ್ನು ಬಿಟ್ಟುಹೋಗಿದ್ದಾರೆ. ಆದರೆ ವಿದೇಶಿ ಬರವಣಿಗೆಗಳನ್ನು ಉಪಯೋಗಿಸುವಾಗ ಅನೇಕ ಕುಂದು ಕೊರತೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ವಿದೇಶಿ ಬರಹಗಾರನ ಬರವಣಿಗೆಯ ಮಹತ್ವವನ್ನು ಅವನ ಶಿಕ್ಷಣದ ಮಟ್ಟ, ಅವನ ಅನುಭವ, ಅವನ ನಿಷ್ಪಕ್ಷಪಾತತೆ ಹಾಗೂ ಅವನು ಎಷ್ಟು ವರ್ಷಗಳ ಕಾಲ ಭಾರತದಲ್ಲಿದ್ದು ಭಾರತವನ್ನು ಅರಿತಿದ್ದ ಎಂಬ ಆಂಶಗಳ ಮೇಲೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ವಿದೇಶಿಯರ ಬರವಣಿಗೆಗಳು ಮಹತ್ವ ಪೂರ್ಣವಾಗಿರುತ್ತವೆ. ಏಕೆಂದರೆ ಅವರು ಅಧಿಕೃತವಾದ ವ್ಯಕ್ತಿಗಳಿಂದ ಕೇಳಿದ ಹಾಗೂ ತಾವಿದ್ದ ಅವಧಿಯ, ತಾವೇ ನೋಡಿದ ಘಟನೆಗಳನ್ನು ಕುರಿತು ಬರೆಯುವುದರಿಂದ ಇತಿಹಾಸ ರಚನೆಗೆ ಸಹಕಾರಿಯಾಗುತ್ತವೆ. ಭಾರತದ ದೇಶೀಯ ಆಧಾರಗಳು ಅನೇಕ ಮುಖ್ಯ ಘಟನೆಗಳ ಬಗ್ಗೆ ಮೌನ ತಾಳಿದಾಗ ಅಥವಾ ಬಿರುಕುಗಳು ಕಂಡುಬಂದಾಗ ಆ ಬಿರುಕುಗಳನ್ನು ಮುಚ್ಚಲು ಕೊಂಡಿಯಾಗಿ ವಿದೇಶಿ ಬರವಣಿಗೆಗಳು ಸಹಕಾರಿಯಾಗುತ್ತವೆ.

 

ವಿದೇಶಿ ಬರವಣಿಗೆಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು.

 1) ಗ್ರೀಕ್ ಬರವಣಿಗೆಗಳು
2) ಚೀನಿ ಬರವಣಿಗೆಗಳು
 3) ಅರಬ್ ಬರವಣಿಗೆಗಳು.

 

ಗ್ರೀಕ್ ಬರವಣಿಗೆಗಳು

 

ಪರ್ಷಿಯಾದ ದೊರೆ ಸೈರಸ್‌ನು ಭಾರತದ ಮೇಲೆ ದಂಡಯಾತ್ರೆ ಕೈಗೊಳ್ಳುವ ಮೂಲಕ ಪರ್ಷಿಯಾ ಮತ್ತು ಭಾರತಗಳ ನಡುವೆ ಸಂಪರ್ಕ ಉಂಟಾಯಿತು. ಸೈರಸ್‌ನ ಮೊಮ್ಮಗ ಡೇರಿಯಸ್‌ನು ಸಹ ಭಾರತದ ಸಿಂದ್. ರಜಪೂತನ ಪ್ರದೇಶಗಳನ್ನು ವಶಪಡಿಸಿಕೊಂಡು ಭಾರತದ ಭಾಗಗಳ ಮೇಲೆ ಅಧಿಕಾರ ಹೊಂದಿದನು. ಈ ಚರಿತ್ರೆಯ ಅಂಶಗಳು ಹೆರೋಡೊಟಸ್, ಸ್ಟೈಲಾಕ್ಸ್, ಟೇಸಿಯಸ್ ಮತ್ತು ನಿಯಾರ್ಕಸ್ ಮುಂತಾದವರ ಬರವಣಿಗೆಗಳಿಂದ ತಿಳಿದುಬರುತ್ತದೆ. ಗ್ರೀಕ್ ಇತಿಹಾಸಜ್ಞನಾದ ಹೆರೋಡೊಟಸನು ತನ್ನ 'ಹಿಸ್ಟರೀಸ್' ಎಂಬ ಗ್ರಂಥದಲ್ಲಿ ಕ್ರಿ. ಪೂ 5ನೇ ಶತಮಾನದಷ್ಟು ಹಿಂದೆಯೇ “ನಮಗೆ ತಿಳಿದಿರುವ ರಾಷ್ಟ್ರಗಳಲ್ಲೆಲ್ಲಾ ಭಾರತವೇ ಅತಿ ಹೆಚ್ಚಿನ ಜನಸಂಖ್ಯೆ ಉಳ್ಳ ದೇಶ" ಎಂದಿದ್ದಾನೆ ಹಾಗೂ ಪರ್ಷಿಯಾ ಮತ್ತು ಗ್ರೀಕರ ನಡುವಣ ಯುದ್ಧಗಳು, ಇಂಡೋ-ಪರ್ಷಿಯನ್ ಸಂಬಂಧದ ಬಗ್ಗೆ ಬರೆದಿದ್ದಾನೆ. ಕ್ರಿ.ಪೂ. 5ನೇ ಶತಮಾನದಲ್ಲಿ ವಾಯುವ್ಯ ಭಾರತದಲ್ಲಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಬರೆಯುತ್ತಾ "ಉತ್ತರ ಭಾರತವು ಡೇರಿಯಸ್ ಸಾಮ್ರಾಟನ ಸಾಮ್ರಾಜ್ಯದ ಭಾಗವಾಗಿದೆ ಮತ್ತು 20ನೇ ಸತ್ರಪಿ ಅಥವಾ ಪ್ರಾಂತ್ಯವಾಗಿದೆ" ಎಂದಿದ್ದಾನೆ.

ಕ್ರಿ.ಪೂ. 4ನೇ ಶತಮಾನದಲ್ಲಿ ಭಾರತದ ಮೇಲೆ ದಿಗ್ವಿಜಯ ಕೈಗೊಂಡ ಅಲೆಕ್ಸಾಂಡರನ ಸೈನಿಕ ಚಟುವಟಿಕೆಗಳು ನಮಗೆ ಗ್ರೀಕ್ ಬರವಣಿಗೆಗಳಿಂದ ಮಾತ್ರ ತಿಳಿದುಬರುತ್ತವೆ. ಅರಿಯನ್ನು ಅಲೆಕ್ಸಾಂಡರನ ದಿಗ್ವಿಜಯವನ್ನು ಅವನ ಸೈನ್ಯದಲ್ಲೇ ಅಡ್ಡಿರಲ್ ಆಗಿದ್ದ ನಿಯಾರ್ಕಸ್ ಎಂಬುವವನ ಅಭಿಪ್ರಾಯಗಳನ್ನಾಧರಿಸಿ ಬರೆದಿದ್ದಾನೆ. ಒನೆಕ್ರೆಟಿಸ್ ಎಂಬುವವನು ನಿಯಾರ್ಕಸ್‌ನ ಜೊತೆಯಲ್ಲಿ ಯುದ್ಧದಲ್ಲಿ ಭಾಗವಹಿಸಿದ್ದು ಅಧಿಕೃತ ಮಾಹಿತಿ ನೀಡುತ್ತಾನೆ. ನಾವಿಕನಾದ ಸೈಲ್ಯಾಕ್ಸ್‌ನ ಕೃತಿಯು ಅವನ ಸಿಂಧೂ ನದಿ ಮತ್ತು ಪರ್ಷಿಯನ್ ಕೊಲ್ಲಿಯ ಪ್ರಯಾಣದ ಅವಧಿಯದಾಗಿದ್ದು ಭಾರತದ ಬಗ್ಗೆ ಉತ್ತಮ ಮಾಹಿತಿಗಳನ್ನೊಳಗೊಂಡಿದೆ.

ಮೂರು ಜನ ಗ್ರೀಕ್ ರಾಯಭಾರಿಗಳು ಪಾಟಲಿಪುತ್ರಕ್ಕೆ ಬಂದಿದ್ದರು. ಅವರುಗಳೆಂದರೆ 'ಮೆಗಾಸ್ತನೀಸ್, ಡಯೋನೀಷಿಯಸ್ ಮತ್ತು ಡೀಮ್ಯಾಕಸ್, ಮೆಗಾಸ್ತನೀಸನು ಸೆಲ್ಯೂಕಸ್‌ನಿಂದ ಕಳುಹಿಸಲ್ಪಟ್ಟ ರಾಯಭಾರಿಯಾಗಿ ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿ ಐದು ವರ್ಷಗಳ ಕಾಲ ಇದ್ದನು. ಮೆಗಾಸ್ತನೀಸನು 'ಇಂಡಿಕಾ' ಎಂಬ ಗ್ರಂಥವನ್ನು ರಚಿಸಿದನು. ಇಂಡಿಕಾದ ಮೂಲ ಪ್ರತಿ ಅಥವಾ ಪೂರ್ಣ ಪ್ರತಿ ದೊರಕಿಲ್ಲ. ಆದರೆ ನಂತರದ ಗ್ರೀಕ್ ಬರವಣಿಗೆಕಾರರು ಮೆಗಾಸ್ತನೀಸನ ಮೂಲ ಇಂಡಿಕಾದಿಂದ ಆಯ್ದ ವಾಕ್ಯಗಳನ್ನು ತಮ್ಮ ಬರವಣಿಗೆಗಳಲ್ಲಿ ಉದ್ದರಿಸಿದ್ದಾರೆ. ಅಂತಹ ಎಲ್ಲ ಕೃತಿಗಳಲ್ಲಿನ ಉದ್ಧರಣೆಗಳನ್ನು ಮ್ಯಾಕ್ಕಿಂಡಲ್ ಎಂಬುವವನು ಇಂಗ್ಲಿಷಿಗೆ ಅನುವಾದಿಸಿರುವುದು ಭಾರತದ ಇತಿಹಾಸಕ್ಕೆ ಮುಖ್ಯ ಆಧಾರವಾಗಿದೆ. ಮೆಗಾಸ್ತನೀಸನು ತನ್ನ ಗ್ರಂಥದಲ್ಲಿ ಭಾರತದ ಭೂಮಿ, ವಾಯುಗುಣ, ಪ್ರಾಣಿ ಮತ್ತು ಸಸ್ಯವರ್ಗ, ಆಗಿನ ಜನರ ಜೀವನ ಪದ್ಧತಿ, ರಾಜಕೀಯ ವ್ಯವಸ್ಥೆ ಮುಂತಾದವುಗಳನ್ನು ಕುರಿತು ಬರೆದಿದ್ದಾನೆ. ಅನೇಕ ಸಲ ಮೆಗಾಸ್ತನೀಸನ ಬರವಣಿಗೆಗಳು ಕಪೋಕಲ್ಪಿತವಾದ ಅಂಶಗಳಾಗಿ ಕಂಡುಬರುತ್ತವೆ. ಉದಾಹರಣೆಗೆ ಒಂದೇ ಕಾಲಿನ ಮನುಷ್ಯರು, ನೆಲವನ್ನು ಮುಟ್ಟುವಷ್ಟು ಉದ್ದದ ಕಿವಿಗಳ ಮನುಷ್ಯರು, ಬಾಯಿ ಹಾಗೂ ಕಿವಿಗಳಿಲ್ಲದ ಮನುಷ್ಯರು, ಪಾಂಡ್ಯ ರಾಜ್ಯದಲ್ಲಿದ್ದ ಏಳು ವರ್ಷದ ತಾಯಂದಿರು ಇತ್ಯಾದಿ. ಇಂತಹ ತಾನು ನೋಡದ ಬೇರೆಯವರಿಂದ ಕೇಳಿದ ಅಂಶಗಳನ್ನು ವಿಮರ್ಶೆ ಮಾಡದೆ ಬರೆದಿರುವುದು ಅವನ ಲೋಪವಾಗಿದೆ. ಆದರೆ ಮೌರ್ಯರ ರಾಜಧಾನಿಯ ಸ್ಥಳವರ್ಣನೆ, ಕೋಟೆ, ಕೊತ್ತಳಗಳ, ಅರಮನೆಯ

  ಮೆಗಾಸ್ತನೀಸ್

 ವರ್ಣನೆಗಳು ಅತ್ಯಂತ ಖಚಿತ-ಮಾಹಿತಿಯಾಗಿವೆ. ಪಾಟಲಿಪುತ್ರದ ಆಡಳಿತವನ್ನು 30 ಜನ ಸದಸ್ಯರುಳ್ಳ ಒಂದು ಸಮಿತಿ ನೋಡಿಕೊಳ್ಳುತ್ತಿತ್ತು. ಆರು ವಿಭಾಗಗಳಿಂದ ಕೂಡಿದ ಸೇನಾಡಳಿತವಿತ್ತೆಂಬ ಅಂಶಗಳು ಅರ್ಥಶಾಸ್ತ್ರದಲ್ಲಿರುವ ವಿಷಯಗಳಿಗೆ ಪೂರಕವಾಗಿವೆ. ಮತ್ತಿಬ್ಬರು ರಾಯಬಾರಿಗಳಾದ ಡಯೋನೀಷಿಯಸ್ ಹಾಗೂ ಡೀಮ್ಯಾಕಸ್‌ರ ಬರವಣಿಗೆಗಳು ಹೆಚ್ಚು ಕಡಿಮೆ ಕಳೆದುಹೋಗಿವೆ. ಕೆಲವೇ ಲೇಖಕರ ಬರವಣಿಗೆಗಳಲ್ಲಿ ಕೆಲವು ಸಾಲುಗಳು ಕಂಡು ಬಂದರೂ ಭಾರತದ ಇತಿಹಾಸಕ್ಕೆ ಅವುಗಳಿಂದ ಉಪಯೋಗವಿಲ್ಲ.

 

ಕ್ರಿ. ಶ. 80ರಲ್ಲಿ ಭಾರತದ ತೀರಪ್ರದೇಶಗಳಲ್ಲಿ ಸಂಚರಿಸಿದ "ಪೆರಿಪ್ಲಸ್ ಆಫ್ ಎರಿತ್ರಿಯನ್ ಸೀ" ಎಂಬ ಗ್ರಂಥದ ಅನಾಮಧೇಯ ಕರ್ತೃವು ಪ್ರಾಚೀನ ಭಾರತೀಯ ನೌಣ ಚಟುವಟಿಕೆಗಳು, ಆಗ ಇದ್ದ ಪ್ರಮುಖ ಬಂದರುಗಳ ಹಾಗೂ ವ್ಯಾಪಾರ ಕೇಂದ್ರಗಳ ಪಟ್ಟಿಯನ್ನೊಳಗೊಂಡಿದೆ. ಈ ಕೃತಿಯು ದಕ್ಷಿಣ ಭಾರತದ ಇತಿಹಾಸ ರಚನೆಗೆ ಅತ್ಯುಪಯುಕ್ತ ಆಧಾರವಾಗಿದೆ. ಅಂತೆಯೇ ಸ್ಟ್ರಾಬೋ, ಡಿಯೋಡರಸ್, ಪ್ಲಿನಿ, ಕರ್ಟಿಯಸ್, ಪ್ಲುಟಾರ್ಕ್, ಟಾಲಮಿ ಮುಂತಾದ ಗ್ರೀಕ್ ಪ್ರವಾಸಿಗರ ಬರವಣಿಗೆಗಳು ಭಾರತದ ಬಗ್ಗೆ ವಿಪುಲ ಮಾಹಿತಿಗಳನ್ನೊದಗಿಸುತ್ತವೆ.

ಪ್ರಾಚೀನ ಭಾರತದ ಇತಿಹಾಸವನ್ನೊಳಗೊಂಡ ಅನೇಕ ಲ್ಯಾಟಿನ್ ಬರವಣಿಗೆಗಳು ಇವೆ. ಟ್ರೊಗಸ್ ಪೊಂಪಿಯಸ್‌ನು ಬರೆದ 'ಹಿಸ್ಟೋರಿಯ ಫಿಲಿಪ್ಪಿಕ' ಎಂಬ ಕೃತಿಯೂ ಸಹ ಕಳೆದುಹೋಗಿದ್ದು ಅದರ ಮೂಲ ಪ್ರತಿಯಿಂದ ಉದ್ಧರಿಸಿದ ಅನೇಕ ಬರವಣಿಗೆಗಾರರ ಬರವಣಿಗೆಗಳನ್ನು ಸಂಗ್ರಹಿಸಿಡಲಾಗಿದೆ. ಈ ಕೃತಿಯು ಸೆಲ್ಯೂಕಸ್ ಮತ್ತು ಭಾರತದೊಡನೆಯ ಸಂಬಂಧದ ಬಗ್ಗೆ, ಭಾರತದ ಮೇಲೆ ಬ್ಯಾಕ್ಷಿಯನ್ನರ ಧಾಳಿಯ ಬಗ್ಗೆ ವಿಪುಲ ಮಾಹಿತಿ ನೀಡುತ್ತದೆ. ಪಾಂಪೋನಿಯಸ್ ಮಲಾಸ್ ಎಂಬ ಮತ್ತೊಬ್ಬ ಬರಹಗಾರನು ಭಾರತದ ಭೂಗೋಳದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಾನೆ.

 

ಚೀನಿ ಬರವಣಿಗೆಗಳು

 

ಬೌದ್ಧ ಧರ್ಮವು ವಿದೇಶಗಳಲ್ಲಿ ಪ್ರಸಾರಗೊಂಡಂತೆ ವಿದೇಶಗಳ ಬೌದ್ಧ ಮತೀಯರಿಗೆ ಭಾರತವು ಪವಿತ್ರ ಸ್ಥಳವಾಗಿ ಪರಿವರ್ತನೆಗೊಂಡಿತು. ಬೌದ್ಧ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಲಿಚ್ಚಿಸುವ ಬೌದ್ಧ ಯತಿಗಳು ಯಾತ್ರೆ ಮತ್ತು ವ್ಯಾಸಂಗ ಮಾಡುವ ದೃಷ್ಟಿಯಿಂದ ಭಾರತಕ್ಕೆ ಬಂದರು. ಚೀನಾ ಮತ್ತು ಭಾರತದ ನಡುವೆ ಹಿಂದಿನಿಂದಲೂ ಸಂಬಂಧವಿದ್ದು ಚೀನಾದಲ್ಲಿ ಬೌದ್ಧ ಧರ್ಮ ಪ್ರಸರಿಸಲು ಚೀನಿ ವಿದ್ವಾಂಸರು ಕಾರಣಕರ್ತರಾಗಿದ್ದರು. ಚೀನಾದಿಂದ ಭಾರತಕ್ಕೆ ಬೌದ್ಧ ಸಾಹಿತ್ಯವನ್ನು ಅಧ್ಯಯನ ಮಾಡಬೇಕೆಂಬ ಆಸಕ್ತಿಯಿಂದ ಬಂದವರಲ್ಲಿ ಫಾಹಿಯಾನ್, ಹೂಯನ್ ತ್ಸಾಂಗ್ ಮತ್ತು ಇಕ್ಸಿಂಗ್ ಪ್ರಮುಖರು. ಇವರನ್ನು ಯಾತ್ರಿಕ ತ್ರಯರೆಂದು ಕರೆಯಲಾಗಿದೆ.

ಫಾಹಿಯಾನ್ :

    ಫಾಹಿಯಾನ್

ಫಾಹಿಯಾನನು ಗುಪ್ತವಂಶದ ಎರಡನೇ ಚಂದ್ರಗುಪ್ತನ ಆಸ್ಥಾನಕ್ಕೆ ಬಂದಿದ್ದನು. ಇವನು ಕ್ರಿ.ಶ. 399 ರಲ್ಲಿ ಚೀನಾವನ್ನು ಬಿಟ್ಟು ಬಹಳ ತ್ರಾಸದಾಯಕವಾಗಿ 405ರಲ್ಲಿ ಭಾರತವನ್ನು ತಲುಪಿದನು. ಇವನು ತಕ್ಷಶಿಲ ಮತ್ತು ಮಗದ ಸಾಮ್ರಾಜ್ಯದ ರಾಜಧಾನಿಯಾದ ಪಾಟಲಿಪುತ್ರಕ್ಕೆ ಭೇಟಿ ನೀಡಿದ ನಂತರ ಮಧುರ, ಶ್ರಾವಸ್ತಿ, ಕಪಿಲವಸ್ತು, ಕುಸಿನಗರ ಹಾಗೂ ಕನೂಜ್‌ಗಳನ್ನು ಸಂದರ್ಶಿಸಿದ. ಇವನ ಪ್ರಕಾರ ಪಾಟಲಿಪುತ್ರದಲ್ಲಿ ಎರಡು ಬೌದ್ಧ ಕೇಂದ್ರಗಳಿದ್ದು 6 ರಿಂದ 7 ಸಾವಿರ ಬೌದ್ಧರು ವಾಸವಾಗಿದ್ದರು ಹಾಗೂ ಇಲ್ಲಿಗೆ ಭಾರತದ ವಿವಿಧ ಪ್ರದೇಶಗಳಿಂದ ಭೇಟಿ ಕೊಡುತ್ತಿದ್ದರು. ಇವನು ಅಶೋಕನ ಅರಮನೆಯನ್ನು ನೋಡಿ ಆಶ್ಚರ್ಯಚಕಿತನಾಗಿ ಇದು ದೇವರಿಂದಲೇ ನಿರ್ಮಾಣವಾಗಿರಬೇಕೆಂದು ಅಭಿಪ್ರಾಯಪಟ್ಟಿದ್ದಾನೆ. ಇವನ ಪ್ರಕಾರ ಜನರು ಶ್ರೀಮಂತರು ಹಾಗೂ ಸುಖಲೋಲುಪ್ತರಾಗಿದ್ದರು ಹಾಗೂ ನಗರಗಳಲ್ಲಿ ಉಚಿತ ವೈದ್ಯಕೀಯ, ಊಟ ಮತ್ತು ಬಟ್ಟೆ ವಿತರಿಸಲಾಗುತ್ತಿತ್ತು. ರಸ್ತೆ ಮಾರ್ಗಗಳು ಸುರಕ್ಷಿತವಾಗಿದ್ದು ಸಂಚಾರಯೋಗ್ಯವಾಗಿದ್ದವು. ಕಳ್ಳತನ ಇರಲಿಲ್ಲ, ಶಿಕ್ಷೆಗಳು ಸೌಮ್ಯ ರೂಪದವಾಗಿದ್ದು ತೆರಿಗೆಗಳು ಕಡಿಮೆಯಿದ್ದು ಜನರಿಗೆ ಹೊರೆಯಾಗಿರಲಿಲ್ಲ. ಹೆಚ್ಚಿನ ಜನರು ಸಸ್ಯಹಾರಿಗಳು ಹಾಗೂ ಅಹಿಂಸೆಯಲ್ಲಿ ನಂಬಿಕೆಯುಳ್ಳವರಾಗಿದ್ದರು. ಚಂಡಾಲರು ನಗರದ ಹೊರಗಡೆ ಬದುಕುತ್ತಿದ್ದರು. ಸರ್ಕಾರಿ ನೌಕರರಿಗೆ ಹಣದ ರೂಪದಲ್ಲಿ ವೇತನ ನೀಡಲಾಗುತ್ತಿತ್ತು. ಬೌದ್ಧ ಧರ್ಮಕ್ಕೆ ರಾಜ್ಯದಿಂದ ಸಹಾಯ ಧನ ದೊರೆಯುತಿತ್ತು ಎಂದಿದ್ದಾನೆ. ಕೊನೆಗೆ 413ರಲ್ಲಿ ತಾಮ್ರಲಿಪ್ತಿಯಿಂದ ಸಿಂಹಳದ ಮೂಲಕ ಸ್ವದೇಶಕ್ಕೆ ಹಿಂದಿರುಗಿದನು. ಫಾಹಿಯಾನನ ಬರವಣಿಗೆಗಳಲ್ಲಿ ಅನೇಕ ಲೋಪಗಳು ಹಾಗೂ ದ್ವಂದ್ವತೆಗಳು ಕಂಡುಬರುತ್ತವೆ. ಎರಡನೇ ಚಂದ್ರಗುಪ್ತನ ಆಳ್ವಿಕೆಯಲ್ಲಿ ಇವನು ಭೇಟಿಕೊಟ್ಟಿದ್ದರೂ ತನ್ನ ಬರವಣಿಗೆಗಳಲ್ಲಿ ಆಗ ಆಳುತ್ತಿದ್ದ ರಾಜನ ಹೆಸರನ್ನೇ ಸೂಚಿಸಿಲ್ಲ. ಫಾಹಿಯಾನನು ಕೌರಿ ಎಂಬ ಮಾಧ್ಯಮದ ಹಣವು ಚಾಲ್ತಿಯಲ್ಲಿತ್ತು ಎಂದಿದ್ದಾನೆ. ಆದರೆ ಗುಪ್ತರ ಕಾಲವು ಸುವರ್ಣ ನಾಣ್ಯ ಹಾಗೂ ಬೆಳ್ಳಿಯ ನಾಣ್ಯಗಳ ಚಲಾವಣೆಗೆ ಹೆಸರಾಗಿದೆ. ಇವನು ತನ್ನ ಬರವಣಿಗೆಯಲ್ಲಿ ಎಲ್ಲಿಯೂ ಬೌದ್ಧ ಧರ್ಮದ ಅವಸಾನವನ್ನು ಕುರಿತು ಹೇಳಿಲ್ಲ. ಗುಪ್ತರ ಕಾಲದಲ್ಲಿ ಬೌದ್ಧ ಧರ್ಮವು ಮೂಲೆಗುಂಪಾಗಿ ಬ್ರಾಹ್ಮಣಧರ್ಮವು ಏಳಿಗೆ ಹೊಂದಿದ್ದನ್ನು ಇವನು ತನ್ನ ಬರವಣಿಗೆಗಳಲ್ಲಿ ಗುರುತಿಸಿಲ್ಲ.

 

ಹೂಯನ್ ತ್ಸಾಂಗ್ : 

ಹೂಯನ್ ತ್ಸಾಂಗ್

ಇವನು ಚೀನಾವನ್ನು ಕ್ರಿ. ಶ 629ರಲ್ಲಿ ಬಿಟ್ಟು ಮತ್ತೆ 645ರಲ್ಲಿ ಹಿಂದಿರುಗಿದನು. ಈ ದೀರ್ಘ ಅವಧಿಯ ತನ್ನ ಪ್ರವಾಸದ ಕಾಲವನ್ನು ಕಾಶ್ಮೀರದಲ್ಲಿ 631 ರಿಂದ 632ರ ವರೆಗೆ, 636ರಲ್ಲಿ ಕನೂಜ್, 637ರಲ್ಲಿ ನಳಂದಾ, 639ರಲ್ಲಿ ಆಂಧ್ರ, 640ರಲ್ಲಿ ಕಂಚಿ, 641ರಲ್ಲಿ ಮಹಾರಾಷ್ಟ್ರ, 642 ರಿಂದ 643ರಲ್ಲಿ ಪುನಹ ನಳಂದಾದಲ್ಲಿ, 643ರಲ್ಲಿ ಪುನಹ ಹರ್ಷನ ಆಸ್ಥಾನದಲ್ಲಿದ್ದು ಕೊನೆಗೆ 644ರಲ್ಲಿ ಭಾರತವನ್ನು ಬಿಟ್ಟು ತನ್ನ ತಾಯ್ಯಾಡಿಗೆ ವಾಪಾಸ್ಸಾದನು. ಇವನು ಹರ್ಷನ ಸಾಮ್ರಾಜ್ಯ ವೊಂದರಲಿಯೇ ಎಂಟು ವರ್ಷ ಪ್ರವಾಸ ಮಾಡಿದ್ದನು. ಇವನು ಭಾರತದಲ್ಲಿ ಏನನ್ನು ನೋಡಿದನೋ, ಕೇಳಿದನೋ ಅದೆಲ್ಲವನ್ನು ತನ್ನ ಸಿ-ಯೂ-ಕಿ ಎಂಬ ಗ್ರಂಥದಲ್ಲಿ ಬರೆದಿಟ್ಟಿದ್ದಾನೆ. ಇವನು ನಳಂದಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಕ ವಿದ್ಯಾರ್ಥಿಯಾಗಿದ್ದುಕೊಂಡು ಆ ಕಾಲದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗಳನ್ನು ಅರಿತುಕೊಂಡನು. ಚಕ್ರವರ್ತಿ ಹರ್ಷನ ಇತಿಹಾಸ, ಅವನ ಆಡಳಿತ, ಆಗಿನ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಮುಂತಾದ ಅಂಶಗಳ ಬಗ್ಗೆ ವಿಪುಲಮಾಹಿತಿಯನ್ನು ಇವನ ಗ್ರಂಥ ಒಳಗೊಂಡಿದೆ. ಅಂದು ವಿಶ್ವದಲ್ಲೇ ಹೆಸರಾಂತ ವಿದ್ಯಾಕೇಂದ್ರವಾಗಿದ್ದ ನಳಂದ ವಿಶ್ವವಿದ್ಯಾಲಯದ ಬಗ್ಗೆ ವಿವರಗಳನ್ನು ತಿಳಿಯಲು ಹೂಯನ್‌ ತ್ಸಾಂಗನ ಬರವಣಿಗೆಯೇ ಮುಖ್ಯ ಆಧಾರ. ಹರ್ಷನ ಸಾಮ್ರಾಜ್ಯದ ಎಲ್ಲೆಯನ್ನು ಗುರುತಿಸುವವರಿಗೆ ಇವನ ಬರವಣಿಗೆಗಳು ಉಪಯುಕ್ತ. ಪುಲಿಕೇಶಿ ಹಾಗೂ ಹರ್ಷರ ನಡುವಿನ ಯುದ್ಧದಲ್ಲಿ ಹರ್ಷನು ಹಿಮ್ಮೆಟ್ಟಿದನೆಂದೂ ಹಾಗೂ ಕರ್ನಾಟಕದ ಜನರ ಧೈರ್ಯ, ಸಾಹಸಗಳನ್ನು ಹೊಗಳಿ ಬರೆದಿದ್ದಾನೆ. ಇವನು ದಕ್ಷಿಣ ಭಾರತದಲ್ಲಿ ಸಂಚರಿಸಿ ಆಗ ಬೌದ್ಧ ಧರ್ಮವು ದಕ್ಷಿಣದಲ್ಲಿ ಕ್ಷೀಣಿಸುತ್ತಿದ್ದುದನ್ನು ಗುರುತಿಸುತ್ತಾನೆ. ಪಲ್ಲವರ ರಾಜಧಾನಿಯಾದ ಕಂಚಿಯ ಬಗ್ಗೆ ವಿಪುಲ ಮಾಹಿತಿ ಇದೆ. ಆಗಿನ ಕಾಲದ ಸಾಮಾಜಿಕ ವ್ಯವಸ್ಥೆಯ ಬಗ್ಗೆಯೂ ಡ್ಯೂಯನ್‌ ತ್ಸಾಂಗನು ತಿಳಿಸುತ್ತಾನೆ. ಹಾಗೆಯೇ ಜನರು ಹೊಲಿದ ಬಟ್ಟೆಗಳಿಂದ ಮೈ ಮುಚ್ಚಿಕೊಳ್ಳುತ್ತಿರಲಿಲ್ಲ. ದೇಹ ಶುಚಿಯ ಬಗ್ಗೆ ಅಪಾರ ಕಾಳಜಿಯಿತ್ತು, ಜಾತಿ ವ್ಯವಸ್ಥೆಯು ಕಠಿಣವಾಗಿತ್ತು. ಬ್ರಾಹ್ಮಣ ಧರ್ಮವು ಏಳಿಗೆಯಲ್ಲಿದ್ದು, ಸಂಸ್ಕೃತವು ಜನಸಾಮಾನ್ಯ ಭಾಷೆಯಾಗಿ ಬೆಳವಣಿಗೆಗೊಂಡಿತ್ತು, ಬೌದ್ಧ ಧರ್ಮವು ಅನೇಕ ಪಂಥಗಳಾಗಿ ವಿಭಜಿತಗೊಂಡಿತ್ತು ಎಂದು ನಮೂದಿಸಿದ್ದಾನೆ. ಹೂಯನ್‌ ತ್ಸಾಂಗನ ಬರವಣಿಗೆಗಳಲ್ಲಿನ ಐತಿಹಾಸಿಕತೆಯನ್ನು ಗುರುತಿಸಿದ ಇತಿಹಾಸಕಾರರು ಇವನನ್ನು "ಪ್ರವಾಸಿಗಳ ರಾಜ "ನೆಂದು ಕರೆದಿದ್ದಾರೆ.

 

ಇಕ್ಸಿಂಗ್ : 

                ಇಕ್ಸಿಂಗ್

ಕ್ರಿ.ಶ. 671ರಿಂದ 695ರ ಅವಧಿಯಲ್ಲಿ ಭಾರತದಲ್ಲಿ ಪ್ರವಾಸ ಮಾಡಿದ ಇವನು ರಾಜಗೃಹ, ಕಾಶಿ, ಬುದ್ಧಗಯಾ ಮುಂತಾದ ಸ್ಥಳಗಳಿಗೆ ಭೇಟಿ ಕೊಟ್ಟಿದ್ದನು. ಇವನು ನಳಂದ ವಿಶ್ವವಿದ್ಯಾಲಯದಲ್ಲಿ ಬಹುಕಾಲ ನೆಲೆಸಿದ್ದನು. ಈತನ ಬರವಣಿಗೆಯಿಂದ ಅಂದಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗಳು ತಿಳಿದುಬರುತ್ತವೆ.

ಈ ಚೀನಿ ಪ್ರವಾಸಿಗಳು ಬೌದ್ಧ ಧರ್ಮದ ಅಧ್ಯಯನಕ್ಕೆ ಬಂದವರಾದ್ದರಿಂದ ಇವರ ಆಸಕ್ತಿ ಬೌದ್ಧ ಧರ್ಮಕ್ಕೆ ಹೆಚ್ಚು ಸೀಮಿತವಾಗಿತ್ತು. ಆದ್ದರಿಂದ ಇವರ ಬರವಣಿಗೆಗಳಲ್ಲಿ ವಸ್ತು ಹಾಗೂ ವ್ಯಕ್ತಿಗಳ ವಿಷಯದ ಬಗ್ಗೆ ವಿಮರ್ಶಾತ್ಮಕ ದೃಷ್ಟಿಕೋನದ ಕೊರತೆಯಿದೆ. ಆದರೂ ಚೀನಿ ಬರವಣಿಗೆಗಳಿಂದ ಚೀನಾದ ಗಡಿಗಳಲ್ಲಿದ್ದ ಬುಡಕಟ್ಟು ಜನರ ಚಲನ ವಲನ ಹಾಗೂ ವಲಸೆಗಳ ಬಗ್ಗೆ ತಿಳಿದುಬರುತ್ತದೆ.

 

ಅರಬ್ ಬರವಣಿಗೆಗಳು

 

ಭಾರತ ಮತ್ತು ಆರಬ್ ದೇಶಗಳ ನಡುವಣ ಸಂಬಂಧವು ಕ್ರಿ.ಶ. 8ನೇ ಶತಮಾನದಿಂದ ವ್ಯಾಪಾರಿಗಳು, ನಾವಿಕರು ಹಾಗೂ ಸಾಮ್ರಾಜ್ಯಾಕಾಂಕ್ಷಿಗಳ ಮೂಲಕ ಆರಂಭವಾಯಿತು. ಅರಬ್ ಬರವಣಿಗೆಗಳು ಸಹ ಭಾರತದ ಇತಿಹಾಸ ರಚನೆಗೆ ಸಹಕಾರಿಯಾಗಿವೆ. ಮೊದಮೊದಲ ಪ್ರಮುಖ ಅರಬ್ ಬರವಣಿಗೆಗಳೆಂದರೆ ಕಿತಾಬ್ ಆಲ್ ಫಿಟ್ರಸ್ಟ್, ಕಿತಾಬ್ ಫೊತ್ತು ಮತ್ತು ಯಾಕುತ್ ಹಾಗೂ ಆತರ್ ಆಲ್ ಬಿಲಾದ್‌ರ 'ಡಿಕ್ಷನರಿ ಆಫ್ ಕಂಟ್ರೇಸ್' ಹಾಗೂ ಅಲ್ ಕಜ್ಜಿನ್‌ನ 'ಮಾನ್ಯುಮೆಂಟ್ಸ್ ಆಫ್ ಕಂಟ್ರೇಸ್' ಕೃತಿಗಳು ಮುಖ್ಯವಾದವು. ಅರಬ್ ಬರಹಗಾರರಲ್ಲಿ ಅತಿ ಮುಖ್ಯರಾದವರು ಸುಲೈಮಾನ್ ಹಾಗೂ ಆಲ್ಲೆರೂನಿ.

 

ಸುಲೈಮಾನ್ : 

ಇವನು ಪರ್ಷಿಯಾ ಕೊಲ್ಲಿಯಿಂದ ಪ್ರಯಾಣ ಆರಂಭಿಸಿ ದಕ್ಷಿಣ ಭಾರತದ ಮೂಲಕ ಚೀನಾಕ್ಕೆ ಕ್ರಿ.ಶ. ಸುಮಾರು 851ರಲ್ಲಿ ಭೇಟಿಕೊಟ್ಟಿದ್ದನು. ಇವನ ಬರವಣಿಗೆಗಳಿಂದ ದಕ್ಷಿಣ ಭಾರತ, ಸಿಂಹಳ ದ್ವೀಪ, ಹಾಗೂ ಚೀನಾಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿ ದೊರೆಯುತ್ತವೆ. ಅಲ್ಲದೆ ಉತ್ತರ ಭಾರತದಲ್ಲಿ ಅಧಿಪತ್ಯ ನಡೆಸಿದ ಗುರ್ಜರ ಪ್ರತಿಹಾರರ ದಕ್ಷ ಶಾಸನ ವ್ಯವಸ್ಥೆ, ಮಾನ್ಯಖೇಟದ ರಾಷ್ಟ್ರಕೂಟರ ರಾಜಕೀಯ ಸ್ಥಾನ. ಧಾರ್ಮಿಕ ನೀತಿ ಮುಂತಾದ ವಿಷಯಗಳ ಬಗ್ಗೆ ಬರೆದಿದ್ದಾನೆ.

 

ಆಲ್ಬೆರೂನು : 

ಆಲ್ಬೆರೂನಿ

ಅರಬ್ ಬರವಣಿಗೆಗಾರರಲ್ಲಿ ಆಲ್ಲೆರೂನಿ ಬಹು ಪ್ರಮುಖನಾದವನು. ಇವನು ಮಹಮದ್ ಘಜ್ಞೆಯ ಧಾಳಿಯ ವೇಳೆಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು. ಇವನು ಸಂಸ್ಕೃತವನ್ನು ಕಲಿತು ಅನೇಕ ಸಂಸ್ಕೃತ ಗ್ರಂಥಗಳನ್ನು ಓದಿ ಅವುಗಳಿಂದ ಅರಿತ ವಿಷಯಗಳನ್ನು 'ತೆಕ್-ಐ-ಹಿಂದ್'ಎಂಬ ಬೃಹತ್ ಕೃತಿಯಲ್ಲಿ ಸಂಗ್ರಹಿಸಿದ್ದಾನೆ. ಇವನ ಬರವಣಿಗೆಯ ಲೋಪವೆಂದರೆ ಇವನು ತಾನು ನೋಡಿದ ವಿಷಯಗಳನ್ನು ಬರೆಯುವುದಕ್ಕಿಂತಲೂ ತಾನು ಕೃತಿಗಳಲ್ಲಿ ಓದಿದ ಅಂಶಗಳನ್ನೇ ಬರೆದಿರುವುದು. ಇವನ ಕೃತಿಯಿಂದ ಹಿಂದೂಸ್ತಾನದ ಭೌಗೋಳಿಕ ಮೇರೆಗಳು, ಮುಖ್ಯ ನದಿಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಅಲ್ಲದೆ ಆಗಿನ ಜನರ ಆಹಾರ, ವೇಷಭೂಷಣ, ಶಿಕ್ಷಣ, ಗಣಿತಶಾಸ್ತ್ರ, ರಾಸಾಯನ ಶಾಸ್ತ್ರ, ಖಗೋಳ ಶಾಸ್ತ್ರ, ಭೂಗೋಳ ಶಾಸ್ತ್ರ, ತತ್ವಜ್ಞಾನಗಳ ಕ್ಷೇತ್ರದಲ್ಲಿನ ಅಮೋಘ ಸಾಧನೆಯನ್ನು ಪ್ರಶಂಸಿಸಿದ್ದಾನೆ ಹಾಗೂ ಅವುಗಳನ್ನು ಸಂಗ್ರಹಿಸಿ ಕೃತಿಗಳನ್ನು ರಚಿಸಿದ್ದಾನೆ. ಆದರೆ ಭಾರತೀಯರಲ್ಲಿ ಐತಿಹಾಸಿಕ ಪ್ರಜ್ಞೆ ಅಷ್ಟಾಗಿರಲಿಲ್ಲವೆಂದು, ಸಂಕುಚಿತ ಮನೋ ಭಾವನೆಯುಳ್ಳವರೆಂದು ಟೀಕಿಸಿದ್ದಾನೆ.

ಹೀಗೆ ವಿದೇಶಿ ಬರವಣಿಗೆಗಳು ಇನ್ನಿತರ ಆಧಾರಗಳಲ್ಲಿ. ದೊರೆಯದೇ ಇದ್ದಂತಹ ಅನೇಕ ವಿಷಯಗಳನ್ನು ಒದಗಿಸಿ ಪ್ರಾಚೀನ ಭಾರತದ ಇತಿಹಾಸ ರಚನೆಗೆ ಇದ್ದ ಕೆಲವು ನ್ಯೂನ್ಯತೆಗಳನ್ನು ದೂರ ಮಾಡುತ್ತವೆ. ಈ ಬರವಣಿಗೆಗಳು ಆ ಕಾಲದ ಸಂಗತಿಗಳನ್ನು ಪ್ರತ್ಯಕ್ಷವಾಗಿ ನೋಡಿ ಅಧಿಕೃತ ವ್ಯಕ್ತಿಗಳಿಂದ ಕೇಳಿ ಬರೆದವಾದ್ದರಿಂದ ಇವುಗಳಿಗೆ ವಿಮರ್ಶಾಪೂರ್ವಕವಾಗಿ ಹೆಚ್ಚಿನ ಬೆಲೆ ಇದೆ. ಈ ಬರವಣಿಗೆಗಳಲ್ಲಿ ಉತ್ತೇಕ್ಷೆಗಳು, ನ್ಯೂನ್ಯತೆಗಳು ಇದ್ದರೂ ದೇಶೀಯ ಆಧಾರಗಳನ್ನು ಸ್ಪಷ್ಟಿಕರಿಸುವಾಗ ಅಥವಾ ದೇಶೀಯ ಆಧಾರಗಳ ಕೊರತೆಯ ಸಂದರ್ಭದಲ್ಲಿ ಇವು ಅಮೂಲ್ಯ ಆಧಾರಗಳಾಗುತ್ತವೆ.




END



Post a Comment

Previous Post Next Post